ಚಿಂದಿ ಬಿಟ್ಟು ಹೊಲಿಗೆಯತ್ತ ಚಿತ್ತ

30 vikram 1A
Published on

ವಿಕ್ರಮ ನಾಡಿಗೇರ ಧಾರವಾಡ
ದುಡಿಯಲು ಶಕ್ತಿ ಇದ್ದರೂ ಉದ್ಯೋಗ ಸಿಗುತ್ತಿಲ್ಲ ಎಂದು ಗೋಳಾಡುವವರೇ ಹೆಚ್ಚು. ಆದರೆ ಈ ಯುವತಿ ಮನೆಯಲ್ಲಿನ ಅನೇಕ ನಿರ್ಬಂಧಗಳ ಮಧ್ಯೆಯೂ ಸ್ವಂತ ಉದ್ಯೋಗ ಆರಂಭಿಸಿ ಇಡೀ ಮನೆ ನಿಭಾಯಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾಳೆ.
ಇದು ಧಾರವಾಡ ಲಕ್ಷ್ಮೀಸಿಂಗನೇಕರಿಯ ಚಿಂದಿ ಆಯುವ ಕುಟುಂಬದ ವೈಶಾಲಿ ಗೋಸಾವಿ ಎಂಬುವವರ ಯಶೋಗಾಥೆ. ಈಕೆಯ ತಾಯಿ ವೈಜಯಂತಿ ಅವರಿಗೆ 5 ಜನ ಮಕ್ಕಳು ( 3 ಗಂಡು, 2 ಹೆಣ್ಣು) ಸೇರಿ ಒಟ್ಟು ಕುಟುಂಬದಲ್ಲಿ 12 ಜನರಿದ್ದರೂ ತಾಯಿ ಚಿಂದಿ ಆಯ್ದು ತಂದಾಗಲೇ ಇವರ ಹೊಟ್ಟೆ ತುಂಬಲಿದೆ. ಇಲ್ಲವಾದಲ್ಲಿ ಉಪವಾಸವೇ ಗತಿ. ಇಷ್ಟು ಕಷ್ಟವಿದ್ದರೂ ತಾಯಿ ಮಾತ್ರ ಮಕ್ಕಳನ್ನು ದುಡಿಯಲು ಹೊರ ಕಳಿಸದೆ ತಾವೇ ಮನೆ ಮುನ್ನಡೆಸುತ್ತಿದ್ದಾರೆ.
ವೈಶಾಲಿ ಗೋವಾದಲ್ಲಿ ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಧಾರವಾಡಕ್ಕೆ ಬಂದ ಮೇಲೆ 8ನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿದ್ದಾಳೆ. ಕಲಿಕೆಯಲ್ಲಿ ಆಸಕ್ತಿ ಇದ್ದರೂ ಮನೆ ಪರಿಸ್ಥಿತಿ (ಮಹಿಳೆ ಹೊರ ಹೋಗಬಾರದು) ಆಕೆಯನ್ನು ಕಟ್ಟಿ ಹಾಕಿದೆ. ಆದರೆ ತಾಯಿಯೊಬ್ಬಳೇ ಇಡೀ ಮನೆ ನಡೆಸುತ್ತಿರುವುದರಿಂದ ಬೇಸತ್ತು ಸ್ವಂತ ದುಡಿಮೆ ಆರಂಭಿಸಿದ್ದಾಳೆ.
ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದಲ್ಲಿ ವರ್ಷದ ಹಿಂದೆ 3 ತಿಂಗಳ ಅವಧಿಯ ಹೊಲಿಗೆ ಹಾಗೂ ಫ್ಯಾಷನ್ ಡಿಸೈನಿಂಗ್​ ತರಬೇತಿ ಪಡೆದು ಮನೆಯಲ್ಲಿ ಹೊಲಿಗೆ ಕೆಲಸ ಆರಂಭಿಸಿದ್ದಾಳೆ. ಇದರಿಂದ ತಿಂಗಳಿಗೆ ಸಾವಿರಾರು ರೂ. ದುಡಿಯುತ್ತಿದ್ದಾಳೆ. ಇದಲ್ಲದೆ ತನ್ನ ಸಹೋದರಿಯರು ಹಾಗೂ ಮನೆ ಸುತ್ತಲಿನವರಿಗೂ ಹೊಲಿಗೆ ತರಬೇತಿ ನೀಡಿ ಸಂಪೂರ್ಣ ಸ್ವಾವಲಂಬಿ ಜೀವನ ಕಟ್ಟಿಕೊಂಡು ಇಡೀ ಕುಟುಂಬದ ಬಂಡಿ ನಡೆಸುವಷ್ಟು ಸಬಲಳಾಗಿದ್ದಾಳೆ.
ಸುಖಿ ಜೀವನ ಇದ್ದರೂ ಅನೇಕರು ಗೋಳಾಡುತ್ತಾರೆ. ಆದರೆ ಅತೀ ಕಷ್ಟದ ಜೀವನದಲ್ಲೇ ಸ್ವತಃ ಸುಖ ಕಂಡುಕೊಂಡು ಇತರರೂ ಸುಖಿ ಜೀವನ ಸಾಗಿಸುವಂತೆ ಮಾಡಿದ ಈ ಯುವತಿ ಇತರರಿಗೂ ಮಾದರಿಯಾಗಿದ್ದಾಳೆ.
ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ನ ಅಂಗ ಸಂಸ್ಥೆಯಾದ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರವು 2023ರ ಜನವರಿಯಿಂದ ಧಾರವಾಡದಲ್ಲಿ ಆರಂಭವಾಗಿದೆ. ಈ ಕೇಂದ್ರವು ಯುವಕ, ಯುವತಿಯರಿಗೆ ಸ್ವ ಉದ್ಯೋಗ, ಇತರೆ ಕೌಶಲಾಧಾರಿತ ತರಬೇತಿಗಳನ್ನು ನೀಡುವ ಮೂಲಕ ಬಡ ಜನರ ಜೀವನಕ್ಕೆ ಆಧಾರವಾಗಿದೆ. ಇಲ್ಲಿ ತರಬೇತಿ ಪಡೆದ ಸಾವಿರಾರು ಜನರು ಸ್ವಂತ ಉದ್ಯೋಗ ಆರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದಲ್ಲಿ ಒಂದು ವರ್ಷದ ಹಿಂದೆ 3 ತಿಂಗಳ ಅವಧಿಯ ಹೊಲಿಗೆ ಹಾಗೂ ಫ್ಯಾಷನ್ ಡಿಸೈನಿಂಗ್​ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸಿದ್ದೇನೆ. ನನ್ನ ತಂಗಿ ಸೇರಿ ಇತರರಿಗೂ ಹೊಲಿಗೆ ಕಲಿಸುತ್ತಿದ್ದೇನೆ. ಮೊದಲು ಮನೆಯಲ್ಲಿ ತಾಯಿ ಮಾತ್ರ ದುಡಿಯುವವರಿದ್ದರು. ಈ ತರಬೇತಿ ಪಡೆದ ಬಳಿಕ ನಾನೂ ದುಡಿದು ತಾಯಿಗೆ ಆಸೆ ಆಗಿದ್ದೇನೆ ಎಂಬ ಖುಷಿ ಮೂಡಿದೆ.*ವೈಶಾಲಿ ಗೋಸಾವಿ, ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net