‘ನನ್ನದು’ ತೊರೆದು ‘ನಮ್ಮದು’ ಭಾವ ವೃದ್ಧಿಯಾಗಲಿ

24gkn1-a- RAGHAVESHWAR SHREE
Published on

ಗೋಕರ್ಣ: ಸಮಾಜಕ್ಕೆ ಅನುಪಮ ಮತ್ತು ಅಸಾಧಾರಣ ಸೇವೆ ಸಲ್ಲಿಸಿದ ಹಿರಿಯರ ತ್ಯಾಗ, ಶ್ರದ್ಧೆ ಮತ್ತು ಸಾಧನೆಯನ್ನು ಮರೆಯಬಾರದು. ಈ ಕೃತಜ್ಞತಾ ಭಾವವೇ ಯುವ ಸಮುದಾಯಕ್ಕೆ ಸಾರ್ವಕಾಲಿಕ ಪ್ರೇರಣೆಯಾಗಬಲ್ಲದು ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ವಿಷ್ಣುಗುಪ್ತ ವಿಶ್ವವಿದ್ಯಾಲಯದಲ್ಲಿ ಕುಮಟಾ ಮಂಡಲದ ಕುಮಟಾ, ಗುಡೇಅಂಗಡಿ, ಕೆಕ್ಕಾರು ಹಾಗೂ ಗೋವಾ ವಲಯಗಳ ಶಿಷ್ಯಭಕ್ತರಿಂದ ಗುರುವಾರ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಕೃತಜ್ಞತಾ ಭಾವವನ್ನು ಇಸ್ರೋದ ಈಗಿನ ಚಂದ್ರಯಾನ ಮಿಷನ್​ನಲ್ಲಿ ಕಾಣಬಹುದಾಗಿದೆ. ಸಂಸ್ಥೆಯ ಸಂಸ್ಥಾಪಕ ಮತ್ತು ವಿಶ್ವದ ಸರ್ವ ಶ್ರೇಷ್ಠ ಖಗೋಳಜ್ಞ, ಕೀರ್ತಿಶೇಷ ವಿಕ್ರಂ ಸಾರಾಭಾಯಿ ಅವರ ಹೆಸರನ್ನು ಚಂದ್ರಯಾನದ ಲ್ಯಾಂಡರ್​ಗೆ ಇಟ್ಟಿರುವ ಹಿಂದೆ ಇದೇ ಕೃತಜ್ಞತಾಭಾವ ಪ್ರಕಾಶಿಸುತ್ತಿದೆ ಎಂದು ಬಣ್ಣಿಸಿದರು.

ಸಾಮಾಜಿಕ ಸೇವೆಯಲ್ಲಿ ಸಮಸ್ತ ವಿಶ್ವಕ್ಕೆ ಮೇಲ್ಪಂಕ್ತಿಯಾಗಬೇಕು. ನಾವು ಕೈಗೊಳ್ಳುವ ಸಣ್ಣ ಸಣ್ಣ ಸೇವೆಯೂ ಸಮಾಜಕ್ಕೆ ದೊಡ್ಡ ಪ್ರಯೋಜನ ನೀಡಬಲ್ಲದು. ಇದಕ್ಕೆ ನನ್ನದು ಎಂಬ ಸ್ವಾರ್ಥ ತೊರೆದು ನಮ್ಮದು ಎನ್ನುವ ವಿಶಾಲಭಾವ ವೃದ್ಧಿಯಾಗಬೇಕು. ಈ ವಿಶಾಲತೆಯೇ ಕೃತಘ್ನತೆಯನ್ನು ಅಳಿಸಿ ಕೃತಜ್ಞತೆಯನ್ನು ರಾರಾಜಿಸುತ್ತದೆ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ 9 ವಿದ್ಯಾರ್ಥಿಗಳನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಆರ್.ಜಿ. ಭಟ್ಟ ಕುಮಟಾ, ಡಾ.ಜಿ.ಜಿ. ಹೆಗಡೆ ಬಗ್ಗೋಣ, ಡಾ. ಜಿ.ಎಲ್. ಹೆಗಡೆ, ಡಾ. ಶ್ರೀಕಾಂತ ಪಿ. ಹೆಗಡೆ, ಸೀತಾರಾಮ ಅನಂತ ಭಟ್ಟ ದೇವಿಮಠ,ನಿವೃತ್ತ ಪ್ರಾಚಾರ್ಯ ಎಸ್.ಎಸ್. ಹೆಗಡೆ, ಡಾ. ವೆಂಕಟಸುಬ್ಬ ವಿಶ್ವೇಶ್ವರ ಭಟ್ಟ ಅವರನ್ನು ಸನ್ಮಾನಿಸಲಾಯಿತು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಉಕ ಜಿಲ್ಲಾ ಪ್ರಾಂತ ಉಪಾಧ್ಯಕ್ಷ ಜಿ.ಎಸ್. ಹೆಗಡೆ, ಕುಮಟಾ ಮಂಡಲದ ಅಧ್ಯಕ್ಷ ಸುಬ್ರಾಯ ಭಟ್ಟ ಮೂರೂರು, ಕಾರ್ಯದರ್ಶಿ ರವೀಂದ್ರ ಭಟ್ಟ ಸೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net