ಮದ, ಮತ್ಸರ ಬಿಟ್ಟು ಸಹಬಾಳ್ವೆ ಮಾಡಿ: ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸಲಹೆ

8
Published on

ಮೈಸೂರು: ವೇಮನ ಹಾಗೂ ಅಂಬಿಗರ ಚೌಡಯ್ಯ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಪಾಲಿಸಬೇಕು ಮತ್ತು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ಶ್ರೀ ವೇಮನ ಮತ್ತು ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವ ಮೂಲಕ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಜನರು ಭಾಗವಹಿಸಿ ಪ್ರೋತ್ಸಾಹ ನೀಡಬೇಕು. ಅಲ್ಲದೆ, ಭಾಗವಹಿಸಿದವರಿಗೆ ವಿಚಾರ ಹಾಗೂ ತಿಳಿವಳಿಕೆಗಳು ಹೆಚ್ಚಾಗುತ್ತವೆ ಎಂದರು.
ಪ್ರತಿಯೊಬ್ಬರ ಜೀವನದಲ್ಲಿಯೂ ಬದಲಾವಣೆಯ ಸಮಯ ಬರುತ್ತದೆ. ಆ ಸಮಯವನ್ನು ಅರಿತು ಉತ್ತಮರಾಗಬೇಕು. ಮನುಷ್ಯ ಶುದ್ದಿಯಾಗಬೇಕೆಂದರೆ ಗಣ್ಯ ವ್ಯಕ್ತಿಗಳನ್ನು ಅನುಸರಿಸಿ ಸಮಾಜದಲ್ಲಿರುವ ಮಾಲಿನ್ಯವನ್ನು ತೊಲಗಿಸಬೇಕು. ಕೆಟ್ಟ ವಿಚಾರಗಳು ಮನಸ್ಸಿನಲ್ಲಿ ಬಂದಾಗ ಅವುಗಳನ್ನು ತೊರೆದು ಒಳ್ಳೆಯ ವಿಚಾರದತ್ತ ಗಮನ ಕೊಡಬೇಕು. ಕ್ರೋದ, ಮದ -ಮತ್ಸರಗಳನ್ನು ಬಿಟ್ಟು ಸಹಬಾಳ್ವೆ ಮಾಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್, ನಗರ ಪಾಲಿಕೆ ಉಪ ಆಯುಕ್ತ ಸೋಮಶೇಖರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಚ್. ಎಂ. ವಸಂತಮ್ಮ, ಪ್ರೊ. ಜ್ಯೋತಿ ಶಂಕರ್, ಕನ್ನಡಪರ ಹೋರಾಟಗಾರ ತಾಯೂರು ವಿಠಲಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net