

ರಟ್ಟಿಹಳ್ಳಿ: ಎಲ್ಲ ನ್ಯಾಯಾಲಯಗಳು ಇಂಗ್ಲಿಷ್ ಭಾಷೆ ಬಿಟ್ಟು ಕನ್ನಡದಲ್ಲಿ ಕಲಾಪಗಳನ್ನು ನಡೆಸಿದರೆ ಕಕ್ಷಿದಾರರಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಮತ್ತು ಗೌರವ ಭಾವನೆ ಉಂಟಾಗುತ್ತದೆ. ಆದ್ದರಿಂದಲೆ ನಾನು ಇತ್ತೀಚೆಗೆ ಕನ್ನಡದಲ್ಲಿ ತೀರ್ಪು ಪ್ರಕಟಿಸಿದ್ದು ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನೂತನ ಸಂಚಾರ ದಿವಾಣಿ ಮತ್ತು ಜೆಎಂಎಫ್ಸಿ ನ್ಯಾಯಾಲಯ ಹಾಗೂ ವಕೀಲರ ಸಂಘದ ನಾಮಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ನೂರಾರು ವರ್ಷಗಳ ಕಾಲ ನಮ್ಮನ್ನು ಗುಲಾಮರಂತೆ ನೋಡಿದ ಬ್ರಿಟಿಷರು ಬಿಟ್ಟು ಹೋದ ಇಂಗ್ಲಿಷ್ ಭಾಷೆ ನಮಗೆ ಅನವಶ್ಯಕ. ನಮ್ಮ ಮಾತೃ ಭಾಷೆ ಕನ್ನಡವಾಗಿದ್ದು, ಇದನ್ನು ಕಡೆಗಣಿಸುವುದು ಸರಿಯಲ್ಲ. ನ್ಯಾಯಾಲಯಗಳಿಂದ ಮನೆ ಬಾಗಿಲಿಗೆ ನ್ಯಾಯ ಮತ್ತು ತ್ವರಿತಗತಿಯಲ್ಲಿ ನ್ಯಾಯ ಸಿಗುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕುಸಿಯುತ್ತಿದ್ದು, ಪರ್ಯುಯ ವ್ಯವಸ್ಥೆಗೆ ಸಾರ್ವಜನಿಕರು ಕಟ್ಟೆ ಪಂಚಾಯಿತಿ ಹಾಗೂ ಪರ್ಯುಯ ನ್ಯಾಯಾಂಗಕ್ಕೆ ಮೊರೆ ಹೋಗುತ್ತಿರುವುದು ಮಾರಕವಾಗಿದೆ. ನ್ಯಾಯಾಲಯಗಳು ಜನರ ಸಮಸ್ಯೆಗಳನ್ನು ಬೇಗ ಇತ್ಯರ್ಥ ಮಾಡುವ ಮೂಲಕ ನ್ಯಾಯಾಂಗದ ಮೇಲಿನ ನಂಬಿಕೆ ಉಳಿಸಿಕೊಳ್ಳುವಂತಾಗಬೇಕು ಎಂದರು.
ಸಮಾಜದಲ್ಲಿ ಅನೇಕ ವರ್ಷಗಳಿಂದ ತುಳಿತಕ್ಕೊಳಪಟ್ಟವರು, ಬಡವರು, ಅಬಲೆಯರು ಹಾಗೂ ರೈತ ಸಮುದಾಯಕ್ಕೆ ನ್ಯಾಯಾಲಯದ ಮೇಲೆ ನಂಬಿಕೆ ಬರುವಂತೆ ವಕೀಲರು ಮತ್ತು ನ್ಯಾಯಾಧೀಶರು ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ಹಿರೇಕೆರೂರ ಕೋರ್ಟ್ನಲ್ಲಿ ರಟ್ಟಿಹಳ್ಳಿ ತಾಲೂಕಿಗೆ ಸಂಬಂಧಿಸಿದ ಶೇ. 60ರಷ್ಟು ಪ್ರಕರಣಗಳಿರುವುದರಿಂದ ಈ ಭಾಗದ ವಕೀಲರು, ರಾಜಕೀಯ ನಾಯಕರು, ಸಂಘ ಸಂಸ್ಥೆಗಳು ಪ್ರತ್ಯೇಕ ಕೋರ್ಟ್ ಬೇಕೆಂದು ಹೋರಾಟ ನಡೆಸಿದ್ದರು. ಇದರ ಫಲವಾಗಿ ಇಂದು ತಾಲೂಕಿಗೆ ನೂತನ ಸಂಚಾರ ದಿವಾಣಿ ಮತ್ತು ಜೆಎಂಎಫ್ಸಿ ನ್ಯಾಯಾಲಯ ದೊರೆತಿದೆ. ನೂತನ ಸಂಚಾರ ಪೀಠ ವಾರದ ಪೂರ್ತಿ ದಿನಗಳು ನಡೆಯಲಿ ಎಂದು ಆಶಯ ವ್ಯಕ್ತಪಡಿಸಿದರು.
ಹೈಕೋರ್ಟ್ ಆಡಳಿತಾತ್ಮಕ ನ್ಯಾಯಮೂರ್ತಿ ಹೇಮಂತ ಚಂದನಗೌಡರ, ಮಾಜಿ ಶಾಸಕ ಹಾಗೂ ನೂತನ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬನ್ನಿಕೋಡ ಮಾತನಾಡಿದರು.
ಹಾವೇರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ. ಸದಾನಂದಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ. ತೊಗರ್ಸಿ, ಕಾರ್ಯದರ್ಶಿ ಎಂ.ಬಿ. ಜೋಕನಾಳ, ಲೋಕೋಪಯೋಗಿ ಇಂಜಿನಿಯರ್ ಎನ್.ಎನ್. ಪಾಟೀಲ, ಸುನೀಲ ಹೊಸಮನಿ, ಪಿ.ಡಿ ಬಸನಗೌಡ್ರ, ಬಿ.ಸಿ. ಪಾಟೀಲ, ಫಕೀರೇಶ ತುಮ್ಮಿನಕಟ್ಟಿ, ಚಂದನಾ ಕಬ್ಬಿಣಕಂತಿಮಠ, ಬಿ.ಬಿ. ಗುಬ್ಬಿ, ವಿಜಯ ಗೋಳಪ್ಪನವರ, ಸಂತೋಷ ಪಾಟೀಲ, ಎನ್.ಆರ್. ಕೋಣನತಲಿ ಮತ್ತಿತರರು ಉಪಸ್ಥಿತರಿದ್ದರು.