ಅಹಂ ಬಿಟ್ಟು ವಿಧೇಯತೆಯಿಂದ ಮುಂದೆ ಸಾಗಿ: ಧರ್ಮಗುರು ಫಾದರ್ ವಿಜಯಕುಮಾರ್

12
Published on

ಮೈಸೂರು: ಎಸ್‌ಎಸ್‌ಎಲ್‌ಸಿ ಎನ್ನುವುದು ಯಶಸ್ಸಿನ ಮೊದಲ ಮೆಟ್ಟಿಲಾಗಿದ್ದು, ಅಹಂಕಾರ ಪಡದೇ ವಿಧೇಯತೆಯಿಂದ ಮುಂದೆ ಸಾಗಬೇಕು ಎಂದು ಮೈಸೂರು ಡಯೋಸಿಸನ್ ಎಜುಕೇಷನಲ್ ಸೊಸೈಟಿಯ (ಎಂಡಿಇಎಸ್) ಕಾರ್ಯದರ್ಶಿ ಹಾಗೂ ಸಂಯೋಜಕ ಧರ್ಮಗುರು ಫಾದರ್ ವಿಜಯಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿಬಿಎಸ್‌ಇ ಶಾಲೆಗಳನ್ನು ಒಳಗೊಂಡಿರುವ ಎಂಡಿಇಎಸ್ ಅಧೀನದ ಸೇಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್ ವಿಜಯನಗರ, ಇಲವಾಲ, ಜಯಲಕ್ಷ್ಮೀಪುರಂ, ಸೇಂಟ್ ಮಥಿಯಾಸ್ ಕ್ಯಾಂಪಸ್‌ನಲ್ಲಿರುವ ಸೇಂಟ್ ಜೋಸೆಫ್ ಶಾಲೆ, ರಾಜೀವ್ ನಗರದ ಸೇಂಟ್ ಜೋಸೆಫ್ ಶಾಲೆ ಸೇರಿದಂತೆ ವಿವಿಧ ಶಿಕ್ಷಣ ಕೇಂದ್ರಗಳ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಜಯಲಕ್ಷ್ಮೀಪುರಂನ ಎಂಡಿಇಎಸ್‌ನಲ್ಲಿ ಶನಿವಾರ ಸನ್ಮಾನಿಸಿ ಅವರು ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಕ್ಷಣ ನಾವು ಟಾಪರ್ ಅಗಿದ್ದೇವೆ ಎನ್ನುವ ಅಹಂ ಬರಬಾರದು. ಇದು ನಿಮ್ಮ ಜೀವನದ ಮೊದಲ ಮೆಟ್ಟಿಲಾಗಿದ್ದು, ಮುಂದಿನ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಇಂತಹ ಮೆಟ್ಟಿಲುಗಳು ಇವೆ. ಅವುಗಳನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ನಿಮ್ಮ ತಂದೆ- ತಾಯಿ, ಕಲಿತ ಶಿಕ್ಷಣ ಸಂಸ್ಥೆಗೂ ಸಾರ್ಥಕ ಭಾವನೆ ಬರುತ್ತದೆ ಎಂದರು.
ಹೆಚ್ಚು ಶಿಕ್ಷಣ ಪಡೆದಷ್ಟೂ ವಿನಯ, ವಿಧೇಯತೆ ಬರಬೇಕು. ಆದರೆ ಹಲವರಲ್ಲಿ ಗುರು, ಹಿರಿಯರಿಗೆ ಗೌರವ ಕೂಡ ಕೊಡದಷ್ಟು ಅಹಂ ಬೆಳೆದಿರುತ್ತದೆ. ಇಂತಹ ಧೋರಣೆ ಸರಿಯಲ್ಲ ಎಂದು ಫಾದರ್ ವಿಜಯಕುಮಾರ್ ಹೇಳಿದರು.
ಅಡೆತಡೆಗಳನ್ನು ದಾಟಿ ಸಾಗಿ:
ಇಂದಿನ ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ, ಟಿವಿ, ಸಿನಿಮಾ ಸೇರಿದಂತೆ ಮನಸ್ಸನ್ನು ವಿಚಲಿತಗೊಳಿಸುವ ಸಾಕಷ್ಟು ವಿದ್ಯಮಾನಗಳು ನಮ್ಮ ಸುತ್ತ ಮುತ್ತ ಇವೆ. ಇವುಗಳನ್ನೆಲ್ಲಾ ದಾಟಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅಂತಹ ಅಡೆತಡೆಗಳನ್ನು ಮೀರಿ ಮುನ್ನಡೆದರ ಖಂಡಿಸಿ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈಗಷ್ಟೇ ನೀವು ಒಂದು ಹಂತವನ್ನು ತಲುಪಿದ್ದೀರಿ. ಇನ್ನೂ ಏರಲು ಸಾಕಷ್ಟು ಮೆಟ್ಟಿಲುಗಳಿವೆ. ನೀವು ಹೆಚ್ಚು ಯಶಸ್ಸು ಗಳಿಸಿದಷ್ಟೂ ಹೆಚ್ಚು ವಿನಮ್ರರಾಗಬೇಕು. ಈ ಹಂತವನ್ನು ತಲುಪಲು ನಿಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ತೋರಬೇಕು. ಅದಕ್ಕಿಂತ ಮುಖ್ಯವಾಗಿ ಯಶಸ್ಸನ್ನು ಸಂಭ್ರಮಿಸುವಾಗ ನಾವು ಮನುಷ್ಯರು ಎಂಬ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಶಿಕ್ಷಣ ಕಲಿತಷ್ಟು ವಿಧೇಯತೆ, ವಿನಮ್ರತೆ ಇರಬೇಕು. ಮಾನವೀಯ ಮೌಲ್ಯಗಳೊಂದಿಗೆ ಉತ್ತಮ ಮನುಷ್ಯರಾಗಿ ಬದಲಾಗದಿದ್ದರೆ ನಮ್ಮ ಎಲ್ಲ ಶಿಕ್ಷಣ, ಎಲ್ಲ ಸಾಧನೆಗಳು ವ್ಯರ್ಥ. ಪದವಿಗಳು ಇತರರಿಗೆ ಸಹಾಯ ಮಾಡುವ, ಗೌರವಿಸುವ ಮತ್ತು ಪ್ರೀತಿಸುವ ಉತ್ತಮ ಮನುಷ್ಯರನ್ನಾಗಿ ಮಾಡಬೇಕು ಎಂದು ವಿಜಯಕುಮಾರ್ ನುಡಿದರು.
ವಿದ್ಯಾರ್ಥಿಗಳು ಅವರು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಿದಾಗ ಭವಿಷ್ಯದಲ್ಲಿ ಶಾಲೆಯು ಪ್ರತಿ ವಿದ್ಯಾರ್ಥಿಯ ಯಶಸ್ಸನ್ನು ಆನಂದಿಸುತ್ತದೆ. ಪಾಲಕರಿಗೂ ಇದರ ಶ್ರೇಯಸ್ಸು ದಕ್ಕುತ್ತದೆ. ಅಂತಹ ಪೂರಕ ವಾತಾವರಣವನ್ನು ಶಿಕ್ಷಣ ಸಂಸ್ಥೆಗಳು ನಿರ್ಮಿಸಿಕೊಡಬೇಕಿದೆ ಎಂದರು.
ಎಂಡಿಇಎಸ್ ಆಡಳಿತಾಧಿಕಾರಿ ರೆವರೆಂಟ್ ಫಾದರ್ ಅವಿನಾಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೋಯ್ಸ್ ಲೋಬೋ, ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net