ಭಿಕ್ಷಾಟನೆ ಬಿಟ್ಟು ಖಾತ್ರಿ ಕೆಲಸ ಮಾಡಲು ಸೂಚನೆ: ಶಿಶು ದಂಧೆ ನಡೆಯುತ್ತಿದ್ದ ಸ್ಥಳ ಪರಿಶೀಲಿಸಿದ ಅಧಿಕಾರಿಗಳು..

State 1
ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ಸಿರಿಗೇರಿ ಪಟ್ಟಣಕ್ಕೆ ತೆರಳಿದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಅಲ್ಲಿನ ಭಿಕ್ಷುಕರಿಂದ ಮಾಹಿತಿ ಕಲೆ ಹಾಕಿದರು.
Published on

ಬಳ್ಳಾರಿ: ಎಳೆ ಮಕ್ಕಳನ್ನು ಭಿಕ್ಷಾಟನೆಯ ಸರಕಾಗಿ ಬಳಸುತ್ತಿರುವ ಅಮಾನವೀಯ ಜಾಲವನ್ನು ವಿಜಯವಾಣಿ ಬೇಧಿಸಿದ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಜಿಲ್ಲೆಯ ಸಿರಗುಪ್ಪ ತಾಲೂಕು ಸಿರಿಗೇರಿ ಕ್ರಾಸ್ ಬಳಿ ಗುರುವಾರ ತೆರಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಪರಿಶೀಲನೆ ನಡೆಸಿದ್ದಾರೆ.

ದಿನನಿತ್ಯ ಕಂದಮ್ಮಗಳನ್ನು ಸೊಂಟದಲ್ಲಿಟ್ಟುಕೊಂಡು ಹಲವು ಯುವತಿಯರು, ಮಹಿಳೆಯರು ಭಿಕ್ಷಾಟನೆ ನಡೆಸುತ್ತಿದ್ದು, ಮಹಿಳೆಯರು ಭಿಕ್ಷೆ ಬೇಡುವಾಗ ಹಸುಗೂಸುಗಳು ಮಲಗಿರುತ್ತವೆ ಎಂದು ಅಧಿಕಾರಿಗಳಿಗೆ ಸ್ಥಳೀಯರು ವಿವರವಾಗಿ ಮಾಹಿತಿ ನೀಡಿದರು. ಭಿಕ್ಷಾಟನೆ ಮಾಡುವುದನ್ನು ವೃತ್ತಿಯಾಗಿಸಿಕೊಂಡು ಸಿರಿಗೇರಿ, ತೆಕ್ಕಲಕೋಟೆ ಹತ್ತಿರದ ಬಲಕುಂದಿಯ ರಸ್ತೆ ಬಳಿ ವಾಸವಾಗಿರುವ ಮನೆಗಳಿಗೆ ತೆರಳಿದ ಅಧಿಕಾರಿಗಳು, ಹಸುಗೂಸುಗಳನ್ನು ಬಾಡಿಗೆ ಪಡೆದು ಭಿಕ್ಷಾಟನೆ ಮಾಡುವುದು ಸರಿಯಲ್ಲ, ಉದ್ಯೋಗ ಖಾತ್ರಿಯಡಿ ಕೆಲಸ ಕೊಡಲಾಗುವುದು, ಕೆಲಸ ಮಾಡಿ ಜೀವನ ಸಾಗಿಸಿ ಎಂದು ಸೂಚಿಸಿದರು. ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜ್, ವಿಜಯವಾಣಿ ಮುಖಪುಟದಲ್ಲಿ ಗುರುವಾರ ‘ಭಿಕ್ಷಾಟನೆಗೆ ಶಿಶು ದಂಧೆ’ ಶೀರ್ಷಿಕೆಯಡಿ ಪ್ರಕಟವಾದ ತನಿಖಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನಾ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದೇವೆ. ಇಲ್ಲಿ ವಾಸಿಸುವವರ ಮೂಲ ವೃತ್ತಿಯೆ ಭಿಕ್ಷಾಟನೆಯಾಗಿದೆ. ಜಿಲ್ಲಾದ್ಯಂತ ಎಲ್ಲೆಲ್ಲಿ ಇಂಥವರು ವಾಸವಾಗಿದ್ದಾರೆ ಎಂಬುದನ್ನು ಪರಿಶೀಲಿಸಿ ಅವರಿಗೆ ಪುನವರ್ಸತಿ ಕಲ್ಪಿಸಲಾಗುವುದು ಎಂದರು.

ಹೆಣ್ಣು ಮಗು ಮಾರಾಟ: ಹಸುಗೂಸುಗಳನ್ನು ಬಾಡಿಗೆ ಪಡೆದು ಭಿಕ್ಷೆ ಬೇಡುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೆ ನವಜಾತ ಶಿಶು ಮಾರಾಟ ಮಾಡಿದ ಪ್ರಕರಣವು ಗಣಿ ಜಿಲ್ಲೆಯಲ್ಲಿ ಗುರುವಾರ ಬೆಳಕಿಗೆ ಬಂದಿದೆ. ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದ ದಂಪತಿ ಮೌಲಮ್ಮ-ರಾಮಾಂಜಿನಿ ಎಂಬುವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಿಂದ 20ಸಾವಿರ ರೂ.ಗೆ ಹೆಣ್ಣು ಮಗು ಪಡೆದಿದ್ದಾರೆ. ಇದನ್ನು ಅಂಗನವಾಡಿ ಕಾರ್ಯಕರ್ತೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ಪ್ರಕರಣ ದಾಖಲಾಗಿದೆ. ಇದರಲ್ಲಿ ಮಧ್ಯವರ್ತಿಗಳೇ ಮಗುವನ್ನು ಮಾರಾಟ ಮಾಡಿಸಿದ್ದು, ಮಗು ಮಾರಾಟ ಜಾಲ ಸಕ್ರಿಯವಾಗಿರುವುದು ದೃಢವಾಗಿದೆ.

ಮಹಿಳೆ ಮತ್ತು ಮಕ್ಕಳ ಶೋಷಣೆ ಸಹಿಸಲಾಗದು. ಮಕ್ಕಳ ರಕ್ಷಣೆಗಾಗಿ ಕಾನೂನುಗಳಿವೆ. ಮಕ್ಕಳನ್ನು ಬಳಸಿ ಭಿಕ್ಷಾಟನೆ ಮಾಡುವುದು ತಪ್ಪು. ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಸೂಚಿಸಿ ಸೂಕ್ತ ಕ್ತಮ ಕೖಗೊಳ್ಳಲಾಗುವುದು.

| ಹಾಲಪ್ಪ ಆಚಾರ್ ಮಹಿಳಾ ಮತ್ತು ಮಕ್ಕಳ ಸಚಿವ

ಮಕ್ಕಳನ್ನು ಬಾಡಿಗೆ ಪಡೆದು ಭಿಕ್ಷೆ ಬೇಡುವ ಜಾಲ ಇರುವುದು ಆತಂಕಕಾರಿ, ಈ ಬಗ್ಗೆ ಕ್ರಮ ಕೈಗೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚುನಾವಣೆ ಬಳಿಕ ಅಧಿಕಾರಿಗಳ ಜತೆ ಸಭೆ ನಡೆಸಲಾಗುವುದು.

| ಕೋಟ ಶ್ರೀನಿವಾಸ ಪೂಜಾರಿ ಸಚಿವ

ವಿಜಯವಾಣಿ ಪತ್ರಿಕೆಯ ತನಿಖಾ ವರದಿಯನ್ನು ಓದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಮಕ್ಕಳನ್ನು ಬಿಕ್ಷಾಟನೆ ಉದ್ದೇಶಕ್ಕಾಗಿ ನೀಡುತ್ತಿರುವುದು ನಿಜಕ್ಕೂ ದುರಂತ. ಇಂತಹ ಪ್ರಕರಣ ಕಂಡು ಬಂದ ಕೂಡಲೇ ಸಾರ್ವಜನಿಕರು ಚೈಲ್ಡ್​ಲೈನ್ ಸಹಾಯವಾಣಿ 1098ಗೆ ಕರೆ ಮಾಡಿ.

| ಜಿ.ಎಂ.ರೇಖಾ ಶಿವಮೊಗ್ಗ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net