

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ದಾವಣಗೇರಿಯ ಕರ್ನಾಟಕ ರಾಜ್ಯ ಅಲೆಮಾರಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತರ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಫೆ. 5ರಂದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಜ್ಯ ಮಟ್ಟದ ಅಲೆಮಾರಿ ಶಿಳ್ಳೇಕ್ಯಾತ-ಕಿಳ್ಳೇಕ್ಯಾತರ ಸಮುದಾಯದ ಸ್ಥಿತಿಗತಿ ಮತ್ತು ತೊಗಲು ಗೊಂಬೆಯಾಟದ ಉತ್ಸವ ಹಾಗೂ ಗೊಂಬೆಯಾಟವಯ್ಯ ಪತ್ರಿಕೆ, ನಾಡು ಕಂಡ ನಾಡೋಜ ಗ್ರಂಥ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.30ಕ್ಕೆ ಶ್ರೀ ಕಲ್ಲಿನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕಾರ್ಯಕ್ರಮ ಉದ್ಘಾಟಿಸುವರು. ದ್ವಿಮಾಸಿಕ ಪತ್ರಿಕೆಯನ್ನು ಡಾ. ಎಂ.ಆರ್. ಗಂಗಾಧರ, ಗ್ರಂಥವನ್ನು ಡಾ. ವೀರಣ್ಣ ರಾಜೂರ ಬಿಡುಗಡೆ ಮಾಡುವರು. ಡಾ. ಸಣ್ಣವಿರಣ್ಣ ದೊಡ್ಡಮನಿ ಆಶಯ ನುಡಿಗಳನ್ನಾಡುವರು. ಡಾ. ಧನವಂತ ಹಾಜವಗೋಳ ಗ್ರಂಥ ಹಾಗೂ ಪತ್ರಿಕೆ ಕುರಿತು ಮಾತನಾಡುವರು. ಭೀಮವ್ವ ಶಿಳ್ಳೇಕ್ಯಾತರ, ನಾರಾಯಣಪ್ಪ ಶಿಳ್ಳೇಕ್ಯಾತರ, ಕೇಶವಪ್ಪ ಶಿಳ್ಳೇಕ್ಯಾತರ ಅವರಿಗೆ ಸನ್ಮಾನಿಸಲಾಗುವುದು. ಡಾ. ಬಿ.ವಿ. ಶಿರೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 12 ಗಂಟೆಗೆ ರಾಮಾಯಣ ಕಥಾ ಪ್ರಸಂಗ: ವಾಲಿ ಸುಗ್ರೀವರ ಕಾಳಗ ಸನ್ನಿವೇಶವನ್ನು ತೊಗಲು ಗೊಂಬೆ ಉತ್ಸವದಲ್ಲಿ ತಿಪ್ಪೇಸ್ವಾಮಿ ಶಿಳ್ಳೇಕ್ಯಾತರ ತಂಡ, ಮಹಾಭಾರತ ಕಥಾ ಪ್ರಸಂಗ: ವೀರ ಅಭುಮನ್ಯ ಕಾಳಗವನ್ನು ಪ್ರಸ್ತುತಪಡಿಸುವರು. ಮಧ್ಯಾಹ್ನ 3 ಗಂಟೆಯಿಂದ ರಾಮಾಯಣಕಥಾ ಪ್ರಸಂಗ: ಲವ-ಕುಶರ ಕಾಳಗವನ್ನು ಶಂಕರಪ್ಪ ಕಾಕಪ್ಪ ಶಿಳ್ಳೇಕ್ಯಾತರ, ರಾಮಾಯಣ ಕಥಾ ಪ್ರಸಂಗ: ಸೀತಾಪಹರಣ ಸನ್ನಿವೇಶವನ್ನು ತಿಪ್ಪಣ್ಣ ಶಿಳ್ಳೇಕ್ಯಾತರ ಪ್ರಸ್ತುತಪಡಿಸುವರು. ನಂತರ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ. ಗೊಳಸಂಗಿ ಸಮಾರೋಪ ನುಡಿಗಳನ್ನಾಡುವರು. ಅತಿಥಿಯಾಗಿ ಡಾ. ಸಂತೋಷ ಹಾನಗಲ್ ಆಗಮಿಸುವರು ಎಂದರು.
ಗುರು ಹಿರೇಮಠ, ವೀರಣ್ಣ ಒಡ್ಡೀನ, ಮಹೇಶ ಹೊರಕೇರಿ, ಧನವಂತ ಹಾಜವಗೋಳ, ಇತರರು ಇದ್ದರು.