ನ.೧೧ ರಿಂದ ಲೆದರ್ ಬಾಲ್ ಕ್ರಿಕೆಟ್

KODAVA CRICKET
Published on

ಮಡಿಕೇರಿ: ಕೊಡವ ಕ್ರಿಕೆಟ್ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕೊಡವ ಕ್ರಿಕೆಟ್ ಅಕಾಡೆಮಿ ವತಿಯಿಂದ ನ.೧೧ ರಿಂದ ೧೪ರ ವರೆಗೆ ವಿರಾಜಪೇಟೆಯಲ್ಲಿ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಖಜಾಂಚಿ ಕೊಕ್ಕೆಂಗಡ ರಂಜನ್ ತಿಳಿಸಿದರು.


ಕೊಡಗಿನಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ಹೆಚ್ಚಾಗಿ ನಡೆಯದ ಕಾರಣ ಬಹಳಷ್ಟು ಲೆದರ್ ಬಾಲ್ ಕ್ರಿಕೆಟ್ ಆಟಗಾರರಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಸಿಗುತ್ತಿಲ್ಲ. ಅಲ್ಲದೆ ರಾಜ್ಯ ತಂಡದಲ್ಲಿ ಸ್ಥಾನ ಪಡೆಯವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಕೊಡವ ಯುವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ರಾಜ್ಯ ತಂಡಗಳಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೊಡವ ಸಮಾಜಗಳ ನಡುವಿನ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಸುಮಾರು ೧೨ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾವನ್ನು ನೀಡಲಾಗುವುದು. ಕೊಡಗು ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವ ಕೊಡವರಿಗೆ ಮಾತ್ರ ಪಂದ್ಯಾವಳಿಯಲ್ಲಿ ಆಡಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ತಂಡಗಳು ಇದೇ ಅ.೩೦ ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿ ಹಾಗೂ ತಂಡದ ನೋಂದಾವಣಿಗಾಗಿ ೯೬೩೨೦ ೮೫೫೩೬, ೯೩೪೩೮ ೫೬೮೭೭ ಸಂಪರ್ಕಿಸಬಹುದಾಗಿದೆ ಎಂದರು.


೨೩ ವರ್ಷಗಳಿಂದ ಕ್ರಿಕೆಟ್: ಕ್ರಿಕೆಟ್ ಪಂದ್ಯದ ಮೂಲಕ ಕೊಡವ ಜನಾಂಗದಲ್ಲಿ ಒಗ್ಗಟ್ಟನ್ನು ಮೂಡಿಸಲು ಮತ್ತು ಯುವ ಕೊಡವ ಕ್ರಿಕೆಟಿಗರಿಗೆ ಉತ್ತೇಜನ ನೀಡಲು ಕೊಡವ ಕ್ರಿಕೆಟ್ ಅಕಾಡೆಮಿ ೧೯೯೯ರಲ್ಲ್ಲಿ ಆರಂಭಗೊಂಡಿತು. ಕಳೆದ ೨೩ ವರ್ಷಗಳಿಂದ ಕೊಡವ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಕ ಕುಟುಂಬಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ.


ಕೀತಂಡ ಕಾರ್ಸನ್ ಕಾರ್ಯಪ್ಪ ಅವರು ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಚೇರಂಡ ಕಿಶನ್, ಕಾರ್ಯದರ್ಶಿಯಾಗಿ ಕುಂಡ್ರಂಡ ಬೋಪಣ್ಣ ಹಾಗೂ ಖಜಾಂಚಿಯಾಗಿ ಕೊಕ್ಕೆಂಗಡ ರಂಜನ್ ಕಾರ್ಯನಿರ್ವಹಿಸುತ್ತಿದ್ದಾರೆ. ನಿರ್ದೇಶಕರುಗಳಾಗಿ ಪಟ್ಟಡ ಪ್ರಕಾಶ್, ಬಾಳೆಯಡ ಪ್ರತೀಷ್, ಕೀತಿಯಂಡ ವಿವೇಕ್, ತಾತಂಡ ಪ್ರತಾಪ್, ಚೌರಿರ ಶರತ್, ಮಾಚಂಗಡ ಸೋಮಣ್ಣ, ಚೆಕ್ಕೆರ ಚಂದ್ರಪ್ರಕಾಶ್ ಮತ್ತು ಕೊಟ್ಟಂಗಡ ಸೂರಜ್ ಸಹಕಾರ ನೀಡುತ್ತಿದ್ದಾರೆ ಎಂದು ಕೊಕ್ಕೆಂಗಡ ರಂಜನ್ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ನಿರ್ದೇಶಕರಾದ ಪಟ್ಟಡ ಪ್ರಕಾಶ್, ಮಾಚಂಗಡ ಸೋಮಣ್ಣ, ಬಾಳೆಯಡ ಪ್ರತೀಷ್ ಹಾಗೂ ಕೊಟ್ಟಂಗಡ ಸೂರಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net