ಕಲಿಕೆಗೆ ಪೂರಕ ಚಿತ್ತಾರಗಳ ಭಿತ್ತರ

ylb
ಎನ್.ಜರಕುಂಟಿ ಕಿರಿಯ ಪ್ರಾಥಮಿಕ ಶಾಲಾ ಕಾಂಪೌಂಡ್‌ಗೆ ಬಿಡಿಸಲಾದ ಪರಿಸರ ಜಾಗೃತಿಯ ಚಿತ್ರ.
Published on

ಯಲಬುರ್ಗಾ: ಸ್ಪೂರ್ತಿ ತುಂಬುವ ಪ್ರೇರಣಾತ್ಮಕ ಸಾಲುಗಳು, ಉತ್ತೇಜನ ಹೆಚ್ಚಿಸುವ ಗಾದೆ ಮಾತುಗಳು, ಮಕ್ಕಳ ಕಲಿಕೆಗೆ ಪೂರಕದ ಗೋಡೆ ಬರಹ ಬರೆಯುವ ಮೂಲಕ ತಾಲೂಕಿನಲ್ಲಿ ವಿಶ್ವಬಂಧು ಸೇವಾ ಗುರುಬಳಗ ತನ್ನದೇಯಾದ ಸೇವಾಕಾರ್ಯ ರೂಢಿಸಿಕೊಂಡಿರುವುದು ವಿಶೇಷ.

ಮೊದಲು 20 ಜನ ಶಿಕ್ಷಕರಿಂದ ಪ್ರಾರಂಭವಾಗಿ ಈಗ 110ಕ್ಕೂ ಅಧಿಕ ಶಿಕ್ಷಕರಿದ್ದಾರೆ. ಕೋವಿಡ್ ಸಮಯದಲ್ಲಿ ಕಟ್ಟಿದ ತಂಡದ ಉದ್ದೇಶ ಸೇವಾ ಮನೋಭಾವವಾಗಿದೆ. ಸಮಾನ ಮನಸ್ಕ ಶಿಕ್ಷಕರು, ಉಪನ್ಯಾಸಕರು ಜತೆಗೂಡಿ,

ವೃತ್ತಿಯ ಜತೆಗೆ ಪ್ರವೃತ್ತಿಯನ್ನಾಗಿ ಸರ್ಕಾರಿ ಶಾಲೆಗಳ ಗೋಡೆ ಮೇಲೆ ಮಕ್ಕಳ ಗುಣಾತ್ಮಕ ಕಲಿಕೆ ಹೆಚ್ಚಳಕೆ ಬರಹ ಬರೆಯಲಾಗುತ್ತಿದೆ. ಆಯಾ ಶಾಲಾ ಶಿಕ್ಷಕರು ಉತ್ಸಾಹದಿಂದ ಗೋಡೆ ಬರಹ ಬರೆಸುವ ವಿಚಾರವನ್ನು ಸೇವಾಗುರು ಬಳಗಕ್ಕೆ ತಿಳಿಸಿದರೆ ಸಾಕು.

ಕನಿಷ್ಠ ವೆಚ್ಚದಲ್ಲಿ ಅವಶ್ಯವಿರುವ ಬಣ್ಣಗಳನ್ನು ತಂದು ವಿದ್ಯಾರ್ಥಿಗಳಿಗೆ ಆಕರ್ಷಕವಾಗುವ ಮತ್ತು ಉಪಯೋಗವಾಗುವ ಗಣಿತದ ಸೂತ್ರಗಳು, ಮೂಲಗಳು, ರೇಖಾ ಖಂಡಗಳು, ವ್ಯಾಕರಣ, ಚಿಣ್ಣರ ಚಿತ್ರಗಳು.

ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳು, ದಿಕ್ಕುಗಳು, ವ್ಯಂಜನಗಳು, ಮಗ್ಗಿಗಳು, ವಿಜ್ಞಾನ ಚಿತ್ರಗಳು ಸೇರಿದಂತೆ ಇನ್ನಿತರ ಕಲಿಕೆಗೆ ಪೂರಕವಾಗುವ ಮತ್ತು ಮಕ್ಕಳ ಮನಸ್ಸು ಸೆಳೆಯುವ ಚಿತ್ರ ಬಿಡಿಸಲಾಗುತ್ತದೆ.

ವಿವಿಧ ಕಲರ್‌ಗಳಿಂದ ಗೋಡೆ ಬರಹ ಬರೆಸುವ ಶಾಲಾ ಶಿಕ್ಷಕರು ಕನಿಷ್ಠ ವೆಚ್ಚದಲ್ಲಿ ಗೋಡೆ ಬರಹಕ್ಕೆ ಬಣ್ಣ ಕೊಡಿಸುವುದು. ಬಳಿಕ ಖರ್ಚಾದ ಹಣವನ್ನು ಶಾಲೆಯವರು ಭರಿಸುತ್ತಾರೆ. ವಿಶ್ವಬಂಧು ಸೇವಾ ಗುರುಬಳಗದ ಕಾರ್ಯವು ಶಿಕ್ಷಣ ಪ್ರೇಮಿಗಳು, ಮಕ್ಕಳ ಪಾಲಕರ ಮೆಚ್ಚುಗೆಗೆ ಪಾತ್ರವಾಗಿದೆ.

ಐದು ಶಾಲೆಗಳಿಗೆ ಗೋಡೆಬರಹ: ವಿಶ್ವಬಂಧು ಸೇವಾ ಗುರುಬಳಗದಿಂದ ಇದೂವರೆಗೂ 5 ಶಾಲೆಗಳಿಗೆ ಗೋಡೆ ಬರಹ ಬರೆಯಲಾಗಿದೆ. ಯಲಬುರ್ಗಾದ ಹಿರಿಯ ಪ್ರಾಥಮಿಕ ನಂ.2 ಶಾಲೆ, ಹೊಸಳ್ಳಿ, ಕರಮುಡಿಯ ಹಿರಿಯ ಪ್ರಾಥಮಿಕ ಶಾಲೆ, ಎನ್.ಜರಕುಂಟಿ, ಬಂಡಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬರೆಯಲಾಗಿದೆ.

ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಸರ್ಕಾರಿ ಶಾಲೆಗಳ ಸಬಲೀಕರಣ,ಮಕ್ಕಳ ಗುಣಾತ್ಮಕ ಕಲಿಕೆಗೆ ಪೂರಕವಾಗುವ ಗೋಡೆ ಬರಹ ಬರೆಯಲು ವಿಶ್ವಬಂಧು ಸೇವಾ ಗುರುಬಳಗ ಪ್ರಾರಂಭಿಸಲಾಗಿದೆ. ಸೇವಾ ಮನೋಭಾವ ಇದ್ದವರು ನಮ್ಮ ಬಳಗಕ್ಕೆ ಯಾರಾದರೂ ಸೇರಬಹುದು. ಸಿದ್ದಲಿಂಗಪ್ಪ ಶ್ಯಾಗೋಟಿ, ಮುಖ್ಯಸ್ಥ, ವಿಶ್ವಬಂಧು ಸೇವಾ ಗುರುಬಳಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net