ವಿಜ್ಞಾನ ಕಲಿಯುವುದು ವಿನಾಶಕ್ಕಲ್ಲ ವಿಕಾಸಕ್ಕೆ

5 ckm 2
ಚಿಕ್ಕಮಗಳೂರಲ್ಲಿ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಸಾಹಿತಿ ಚಟ್ನಳ್ಳಿ ಮಹೇಶ್ ವಿಶೇಷ ಉಪನ್ಯಾಸ ನೀಡಿದರು. ದೇವೇಂದ್ರ, ಡಾ.ಜಯದೇವ್, ಶ್ರೀನಿವಾಸ ತಿಮ್ಮೇಗೌಡ, ರುದ್ರಪ್ಪ, ವೆಂಕಟೇಶ್ ಇದ್ದರು.
Published on

ಚಿಕ್ಕಮಗಳೂರು: ವಿದ್ಯೆ ಅಭ್ಯಾಸ ಮಾಡುವವರ ಸ್ವತ್ತೇ ಹೊರತು ಸೋಮಾರಿಗಳ ಆಸ್ತಿಯಾಗುವುದಿಲ್ಲ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು.
ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಪರಿಶ್ರಮ, ತರಬೇತಿ, ಸತತ ಅಭ್ಯಾಸ, ಮನನ ಪ್ರಕ್ರಿಯೆಯಿಂದ ವಿದ್ಯೆಯನ್ನು ನಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದರು.
ಸರ್ವಾಂಗೀಣ ವಿಕಾಸಕ್ಕೆ ವಿದ್ಯೆ ಸಹಕಾರಿಯಾಗ ಬೇಕು. ಆದರೆ ಇಂದು ಓದು ನಿರೀಕ್ಷಿತ ಗುರಿ ಮುಟ್ಟಿದಿಯೇ ಎಂದು ಪ್ರಶ್ನಿಸಿಕೊಂಡಾಗ ನಿರಾಸೆಯಾಗುತ್ತದೆ. ಅಕ್ಷರವಂತರ, ಪದವೀಧರರ ಸಂಖ್ಯೆ ಎಲ್ಲೆಡೆ ಹೆಚ್ಚುತ್ತಿದೆ. ಅದೇ ರೀತಿ ಸಮಾಜದಲ್ಲಿ ಅನ್ಯಾಯ, ಅನೀತಿ, ದೌರ್ಜನ್ಯ, ಅಸಹನೆಯೂ ವಿಪರೀತವಾಗುತ್ತಿದೆ. ನಾವು ಕೊಡುತ್ತಿರುವ ಶಿಕ್ಷಣ ಏನಾಗುತ್ತಿದೆ ಎಂಬುದು ವಿಮರ್ಶೆಗೊಳಪಡಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಇತಿಹಾಸ ಓದುವುದು ವರ್ಷಗಳನ್ನು ನೆನಪಿಟ್ಟುಕೊಳ್ಳಲು ಅಲ್ಲ, ಇತಿಹಾಸ ನಿರ್ಮಿಸಲು. ವಿಜ್ಞಾನ ಕಲಿಯುವುದು ವಿನಾಶಕ್ಕಲ್ಲ, ವಿಕಾಸಕ್ಕೆ ಎಂಬುದನ್ನು ಮರೆಯಬಾರದು. ಉನ್ನತ ಶಿಕ್ಷಣಪಡೆದವರು ಇಂದು ದುಷ್ಕೃತ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ವಿಷಾದನೀಯ. ಆಂತರಿಕ ಮತ್ತು ಬಹಿರಂಗ ವಿಕಾಸಕ್ಕೆ ಕಲಿಕೆ ಪ್ರೇರಕ, ಪೂರಕವಾಗಬೇಕು ಎಂದರು.
ಸರ್ಕಾರಿ ನೌಕರರಾಗಿರುವುದು ಅದೃಷ್ಟ. ಈ ಅವಕಾಶ ಬಳಸಿಕೊಂಡು ಜನಸಾಮಾನ್ಯರಿಗೆ ಒಳಿತು ಮಾಡಬೇಕು. ಕಾನೂನು ರಚನೆಗೊಂಡಿರುವುದು ಜನಹಿತಕ್ಕೆ ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬ ನೌಕರರದಾರನು ತನ್ನ ಸೇವಾವಧಿಯ ಪ್ರಮುಖ ಘಟನೆ, ಅನುಭವಗಳನ್ನು ದಾಖಲಿಸಿದರೆ ಮುಂದಿನವರಿಗೆ ಮಾರ್ಗದರ್ಶಿಯಾಗುತ್ತದೆ. ಬರುವ ಅರ್ಜಿಯನ್ನು ಹೃದಯದಿಂದ ನೋಡಿ ಕಾನೂನನ್ನು ಬಳಸಿಕೊಂಡು ಹೇಗೆ ಸಹಾಯ ಮಾಡಬೇಕು ಎಂದು ಆಲೋಚಿಸಬೇಕೆ ಹೊರತು ಕೊಕ್ಕೆಹಾಕುವ ಅಭ್ಯಾಸ ಒಳ್ಳೆಯದಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net