ಕಲಿಕೆ ಸಾಮುದಾಯಿಕವಾಗಿ ವಿಸ್ತರಣೆ ಅಗತ್ಯ

1001908769
ಆಲೂರು ತಾಲೂಕಿನ ಮಗ್ಗೆ-ಕಾರಗೋಡು ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳ ಮಕ್ಕಳ ಸಂಸತ್ತು ಸಮಾರಂಭದಲ್ಲಿ ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿದರು. ಅಶೋಕ್, ಎಚ್.ಎಂ. ಪ್ರಿಯಾಂಕಾ, ಪೂವಯ್ಯ, ಸಲೀಂ ಸಿರಾಜ್, ಸದಾನಂದ, ನವೀನ್, ನಂದೀಶ್, ವೆಂಕಟೇಶ್, ಧರ್ಮರಾಜ್, ಹರ್ಷಾ, ರಂಗನಾಥ್, ಸವಿತಾ, ಆಸ್ಮಾ ಇತರರು ಇದ್ದರು.
Published on

ಆಲೂರು: ಕಲಿಕೆ ನಾಲ್ಕು ಗೋಡೆಗಳೊಳಗೆ ಸೀಮಿತವಾಗದೆ ಸಾಮುದಾಯಿಕವಾಗಿ ವಿಸ್ತರಣೆಯಾಗಬೇಕಾದರೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಕ್ರಿಯಾಶೀಲವಾಗಿ ತೊಡಗಿಕೊಳ್ಳಬೇಕು ಎಂದು ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಮಗ್ಗೆ-ಕಾರಗೋಡು ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳ ಮಕ್ಕಳ ಸಂಸತ್ತು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮಕ್ಕಳ ಗ್ರಹಿಕೆಗೆ ತರುವಲ್ಲಿ ಶಾಲಾ ಸಂಸತ್ತು ಮಹತ್ತರ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಚುನಾವಣೆಗಳು ನಾಯಕತ್ವ, ಸೇವಾ ಮನೋಭಾವ ಮುಂತಾದ ಮೌಲ್ಯಗಳನ್ನು ಬಿತ್ತುವುದರೊಂದಿಗೆ ಮಕ್ಕಳನ್ನು ಸಾಮಾಜಿಕ, ಸಾಂಸ್ಕೃತಿಕವಾಗಿ ವಿಕಸನಗೊಳಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಾಲೆ ಕಾರ್ಯದರ್ಶಿ ಅಶೋಕ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾದರೆ ಸರ್ವಾಂಗೀಣ ಪ್ರಗತಿಯಾಗುವುದಿಲ್ಲ. ತರಗತಿಯೊಳಗೆ ಪ್ರಗತಿಯಿದ್ದಂತೆ ಕ್ರೀಡಾ ಮೈದಾನದಲ್ಲೂ, ಸಾಂಸ್ಕೃತಿಕ ವಲಯದಲ್ಲೂ ಸಕ್ರಿಯವಾದರೆ ಸಾಧನೆ ಮಾಡಲು ಸಹಕಾರಿ ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕಾ ಮಾತನಾಡಿ, ಒಂದೇ ಶಾಲೆಯಲ್ಲಿ ಹದಿನಾರು ಶಿಕ್ಷಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ನೀಡಿ ಇಡೀ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನೂ ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುವ ನಿಟ್ಟಿನಲ್ಲಿ ಇನ್‌ಸ್ಪೈರ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಇಟ್ಟಿರುವ ಹೆಜ್ಜೆ ಅಭಿನಂದಾರ್ಹವಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗಾಗಿ ವಿವಿಧ ಹಂತಗಳಲ್ಲಿ ಹಮ್ಮಿಕೊಳ್ಳುವ ಜಿಲ್ಲಾ ಪುರಸ್ಕಾರ, ರಾಜ್ಯ ಪುರಸ್ಕಾರ ಹಾಗೂ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಗಳಲ್ಲಿ ಉತ್ತೀರ್ಣವಾದ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಹಾಗೂ ರೈಲ್ವೆ ಇಲಾಖೆ ನೇಮಕಾತಿಗಳಲ್ಲಿ ಪ್ರತ್ಯೇಕ ಮೀಸಲಾತಿ ಇದೆ ಎಂದು ತಿಳಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪೂವಯ್ಯ, ಉಪಾಧ್ಯಕ್ಷ ಸಲೀಂ ಸಿರಾಜ್, ಕಾರ್ಯದರ್ಶಿ ಸದಾನಂದ, ಖಜಾಂಚಿ ನವೀನ್, ಸದಸ್ಯರಾದ ನಂದೀಶ್, ವೆಂಕಟೇಶ್, ಧರ್ಮರಾಜ್, ಹರ್ಷಾ, ರಂಗನಾಥ್, ಸವಿತಾ, ಆಸ್ಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net