ಕಲಿಕೆಗೆ ಕುತ್ತು, ಪರೀಕ್ಷೆಗೆ ಕಾದಿದೆ ಆಪತ್ತು

Learning is hard, waiting for the exam is dangerous
ಗೊಳಸಂಗಿಯ ಶ್ರೀ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ವಿದ್ಯಾರ್ಥಿಗಳೂ ಇಲ್ಲದೇ ಬಿಕೋ ಎನ್ನುತ್ತಿರುವುದು.
Published on

ಗೊಳಸಂಗಿ: ನಾಳೆಯ ನಕ್ಷತ್ರವಾಗಿ ಬಾಳಿ ಬೆಳಗಬೇಕೆಂಬ ಕನಸಿನ ಮೂಟೆಯನ್ನು ಹೊತ್ತು ಪದವಿ ಕಲಿಕೆಯಲ್ಲಿ ತೊಡಗಿದ್ದ ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳ ಪಾಲಿಗೆ ಅತಿಥಿ ಉಪನ್ಯಾಸಕರು ಕಳೆದ 44 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.

ವಿಜಯಪುರ ಜಿಲ್ಲೆಯಲ್ಲಿಯೇ ಪ್ರಪ್ರಥಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎಂಬ ಹೆಗ್ಗಳಿಕೆಯೊಂದಿಗೆ 2003ರಲ್ಲಿ ಗೊಳಸಂಗಿ ಗ್ರಾಮದಲ್ಲಿ ಆರಂಭಗೊಂಡಿರುವ ಚನ್ನಮಲ್ಲಪ್ಪ ಚನ್ನವೀರಪ್ಪ ಹೆಬ್ಬಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಳೆದ ಒಂದೂವರೆ ತಿಂಗಳಿನಿಂದ ಅತಿಥಿ ಶಿಕ್ಷಕರ ಪ್ರತಿಭಟನೆ, ವಿದ್ಯಾರ್ಥಿಗಳ ಗೈರು ಹಾಜರಾತಿಯಿಂದಾಗಿ ದೇವರಿಲ್ಲದ ಗುಡಿಯಂತಾಗಿ ಅಕ್ಷರಶಃ ಬಿಕೋ ಎನ್ನುತ್ತಿದೆ.

ಇಲ್ಲಿನ ಕಾಲೇಜಿನಲ್ಲಿ ಬಿಎ ಮತ್ತು ಬಿಕಾಂ ಸೇರಿ ಒಟ್ಟು 249 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರಿಗೆ ಪ್ರಭಾರಿ ಪ್ರಾಚಾರ್ಯರು ಸೇರಿ 7 ಜನ ಕಾಯಂ ಉಪನ್ಯಾಸಕರು ಮತ್ತು ಗ್ರಂಥಪಾಲಕ, ದೈಹಿಕ ಶಿಕ್ಷಕ ಸೇರಿ 13 ಜನ ಅತಿಥಿ ಉಪನ್ಯಾಸಕರು ನಿತ್ಯ ಪಾಠ ಮಾಡುತ್ತಿದ್ದರು.

ರಾಜ್ಯಾದ್ಯಂತ ನ. 22ರಿಂದ ಅತಿಥಿ ಉಪನ್ಯಾಸಕರೆಲ್ಲ ತಮ್ಮನ್ನು ಕಾಯಂಗೊಳಿಸಬೇಕು, ಉದ್ಯೋಗ ಭದ್ರತೆಯನ್ನು ಒದಗಿಸಬೇಕೆಂದು ಪಟ್ಟು ಹಿಡಿದು ನಡೆಸುತ್ತಿರುವ ಪ್ರತಿಭಟನೆ ಪರಿಣಾಮ ಗೊಳಸಂಗಿ ಪದವಿ ಕಾಲೇಜು ವಿದ್ಯಾರ್ಥಿಗಳ ಮೇಲೂ ಆವರಿಸಿದೆ.

ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇನ್ನೇನು ಮುಂಬರುವ ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ವಾರ್ಷಿಕ ಪರೀಕ್ಷೆ ಎದುರಾಗಲಿದೆ. ಇಂಥ ಸಂದಿಗ್ಧತೆಯ ಕಾಲಘಟ್ಟದಲ್ಲಿ ತಿಂಗಳಾನುಗಟ್ಟಲೇ ಉಪನ್ಯಾಸಕರು ಪ್ರತಿಭಟನೆ ಮಾಡುತ್ತ ಕುಳಿತರೆ ವಿದ್ಯಾರ್ಥಿಗಳ ಪರೀಕ್ಷೆಯ ಗತಿ ಏನು.? ಅಂತಿಮ ವರ್ಷದ ಪರೀಕ್ಷೆಯ ಅಂಕ ಗಳಿಕೆಯಲ್ಲಿ ವ್ಯತ್ಯಾಸವಾದರೆ ಯಾರು ಹೊಣೆ..? ಎಂಬ ಇತ್ಯಾದಿ ಪ್ರಶ್ನೆಗಳು ವಿದ್ಯಾರ್ಥಿಗಳ ಮನದಾಳದಲ್ಲಿ ಸುಳಿದಾಡತೊಗಿವೆ.

ಏತನ್ಮಧ್ಯೆ ಕಾಲೇಜಿನ ಪ್ರಾಂಶುಪಾಲರು ಇತರೇ ಉಪನ್ಯಾಸಕ ಸಿಬ್ಬಂದಿ ವರ್ಗ ಸೇರಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನೆಡೆ ಆಗಬಾರದೆಂಬ ಸದುದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರವನ್ನು ಏರ್ಪಡಿಸಿ ಇಂಗ್ಲಿಷ್, ಇತಿಹಾಸ, ಭೂಗೋಳಶಾಸ್ತ್ರ, ಸಾಮಾನ್ಯ ಜ್ಞಾನ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಭಾರತದ ಆರ್ಥಿಕತೆ ಹೀಗೆ ದಿನಕ್ಕೊಂದು ವಿಷಯದ ಕುರಿತು ವಿಶೇಷ ಬೋಧಕರಿಂದ ಉಪನ್ಯಾಸವನ್ನು ನೀಡಲಾಗಿದೆ ಎಂದು ಪ್ರೊ. ರುದ್ರೇಶ ಅಳ್ಳೊಳ್ಳಿ ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net