

ಬೆಂಗಳೂರು: ಬಿಬಿಎಂಪಿ ಒಡೆತನದ ನರ್ಸರಿಯಿಂದ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಪ್ರಥಮ್ ಎಜುಕೇಶನ್ ಫೌಂಡೇಶನ್ ಕಲಿಕಾ ಸುಧಾರಣೆ ಕಾರ್ಯಕ್ರಮವನ್ನು 2023-24 ಶೈಕ್ಷಣಿಕ ಸಾಲಿನಿಂದ ನಡೆಸಲಾಗುತ್ತಿದೆ ಎಂದು ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.
ಬಿಬಿಎಂಪಿಯು ಜೂನ್ 2023ರಿಂದ ನರ್ಸರಿ, 1-3ನೇ ತರಗತಿ, 4-5ನೇ ತರಗತಿ ಹಾಗೂ 6-7ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಲ್ಲಿ ಕಲಿಕಾ ಮಟ್ಟವನ್ನು ಹೆಚ್ಚಿಸಿ ಫಲಿತಾಂಶ ವೃದ್ಧಿಗೆ ಈ ಕಾರ್ಯಕ್ರಮ ಜಾರಿಗೊಳಿಸುವಲ್ಲಿ ನಿರತವಾಗಿದೆ. ಪ್ರಥಮ್ ಸಂಸ್ಥೆಯು ಅಭಿವೃದ್ಧಿಪಡಿಸಿದ ಬೋಧನಾ-ಕಲಿಕಾ ವಿಧಾನ, ವಿಷಯ/ವಸ್ತು ಮತ್ತು ಕಾರ್ಯಕ್ರಮ ವಿನ್ಯಾಸವನ್ನು ಬಳಸಿಕೊಂಡು ವಿದ್ಯಾರ್ಥಿಗಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ.
ಪಾಲಿಕೆ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಕಲಿಕೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ಪ್ರಥಮ್ ಸಂಸ್ಥೆಯ ಸಿಇಒ ಡಾ. ರುಕ್ಮಿಣಿ ಬ್ಯಾನರ್ಜಿ ಅವರ ಜೊತೆ ಚರ್ಚಿಸಿ ಕಲಿಕಾ ಸುಧಾರಣಾ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದಾರೆ. ಈ ಕಾರ್ಯಕ್ರಮದ ಮೂಲಕ ನರ್ಸರಿಯ ಮಕ್ಕಳಿಂದ ಹಿರಿಯ-ಪ್ರಾಥಮಿಕ ಶ್ರೇಣಿಯವರೆಗೆ ಕಲಿಕೆಯ ಚಟುವಟಿಕೆಗಳಲ್ಲಿ ವಿನೂತನ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ.
ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ತರಬೇತಿ:
ಬಿಬಿಎಂಪಿಯ 16 ಪ್ರಾಥಮಿಕ ಶಾಲೆಗಳು ಮತ್ತು 93 ನರ್ಸರಿ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮ ಅನುಸರಿಸಬೇಕು, ಏನೆಲ್ಲಾ ಯೋಜನೆಗಳನ್ನು ರೂಪಿಸಬೇಕು ಎಂಬುದರ ಕುರಿತು ಸುಮಾರು 260 ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲಾಗಿದೆ. ಇದರಿಂದ 7,766 ಮಕ್ಕಳು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಇದಕ್ಕಾಗಿ 9 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಕಲಿಕಾ ಮಟ್ಟಕ್ಕೆ ಅನುಗುಣವಾದ ಬೋಧನಾ - ಟೀಚಿಂಗ್ ಅಟ್ ದಿ ರೈಟ್ ಲೆವೆಲ್ (ಟಿಎಆರ್‌ಎಲ್) ಮಾದರಿಯಲ್ಲಿ ತರಗತಿಯನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.