ಅಂಕಕ್ಕಿಂತ ಮಾನವೀಯ ಮೌಲ್ಯಗಳ ಕಲಿಕೆ ಮುಖ್ಯ

pathrikabhava trast
Published on

ಮಡಿಕೇರಿ: ಪಠ್ಯದಲ್ಲಿನ ಅಂಕಗಳಿಕೆಯೇ ವಿದ್ಯಾರ್ಥಿಗಳ ಸಾಧನೆಗೆ ಪ್ರಮುಖ ಮಾನದಂಡವಾಗದೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಡಿಸಿಕೊಳ್ಳುವುದೂ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖವಾಗಿರಲಿ ಎಂದು ಹಿರಿಯ ವಕೀಲ, ಮಡಿಕೇರಿ ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎ.ನಿರಂಜನ್ ಕರೆ ನೀಡಿದರು.

ನಗರದ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಜಿಲ್ಲೆಯ ಪತ್ರಕರ್ತರ ೪೭ ವಿದ್ಯಾರ್ಥಿಗಳಿಗೆ ೨.೧೯ಲಕ್ಷ ರೂ. ವೆಚ್ಚದಲ್ಲಿ ವಿದ್ಯಾನಿಧಿ ವಿತರಣಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ನಿರಂಜನ್ ಮಾತನಾಡಿದರು.

ಪತ್ರಕರ್ತರ ಮಕ್ಕಳಲ್ಲಿನ ಶೈಕ್ಷಣಿಕ ಪ್ರತಿಭೆಗೆ ಪ್ರೋತ್ಸಾಹ ನೀಡಲು ಪತ್ರಿಕಾಭವನ ಟ್ರಸ್ಟ್ ನೀಡುತ್ತಿರುವ ವಿದ್ಯಾನಿಧಿ ಕಾರಣವಾಗಲಿ ಎಂದು ಹಾರೈಸಿದರಲ್ಲದೇ, ಜಿಲ್ಲೆಯಾದ್ಯಂತಲಿನ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಿರುವುದು ಶ್ಲಾಘನೀಯ ಎಂದು ನಿರಂಜನ್ ಹೇಳಿದರು.

ಹಿಂದಿನ ಕಾಲದಲ್ಲಿ ಮನೆಯೊಳಕ್ಕೆ ಆಟದ ಮೈದಾನದಿಂದ ಮಕ್ಕಳನ್ನು ಕರೆತರುವುದೇ ಪೋಷಕರಿಗೆ ಸಮಸ್ಯೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಮೊಬೈಲ್ ದಾಸರಾಗಿರುವ ಮಕ್ಕಳನ್ನು ಮನೆಯಿಂದ ಹೊರಕ್ಕೆ ಕರೆತರುವುದೇ ಪೋಷಕರ ಪಾಲಿಗೆ ಸವಾಲಾಗಿದೆ ಎಂದು ವಿಷಾಧಿಸಿದ ನಿರಂಜನ್, ಪೋಷಕರಾಗಿ ನಾವೇನು ಮಾಡುತ್ತೇವೆಯೋ ಅದನ್ನೇ ಮಕ್ಕಳೂ ಅನುಸರಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಈಗಿನ ಮಕ್ಕಳು ತಗ್ಗಿಬಗ್ಗುವುದಕ್ಕೆ ವಿನಯವಂತಿಕೆ ಕಾರಣ ಎಂದು ಭಾವಿಸುವುದಕ್ಕಿಂತ ಮೊಬೈಲ್ ನಲ್ಲಿ ಹುದುಗಿ ಹೋಗಿ ಕತ್ತು ತಗ್ಗಿಬಗ್ಗಿರುವುದೇ ಮುಖ್ಯ ಕಾರಣ ಎಂದೂ ನಿರಂಜನ್ ಮೊಬೈಲ್ ವ್ಯಸನದ ಮಕ್ಕಳ ಬಗ್ಗೆ ವಿಶ್ಲೇಷಿಸಿದರು. ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ಮಕ್ಕಳು ಮೂಕರಂತೆ ಸಂಜ್ಞೆಗಳನ್ನು ಬಳಸಿಯೇ ವ್ಯವಹರಿಸುವ ಕಾಲವೂ ದೂರವಿಲ್ಲ ಎಂದೂ ಅವರು ಎಚ್ಚರಿಸಿದರು.

ಕೊಡಗು ಜಿಲ್ಲೆ ಕಿರಿಯರಿಲ್ಲದೇ ಹಿರಿಯರ ಬೀಡಾಗುತ್ತಿದೆ. ಉದ್ಯೋಗವರಸಿ ಕಿರಿಯರು ಮಹಾನಗರಗಳಿಗೆ ತೆರಳಿ ಹಿರಿಯರು ಮಾತ್ರ ಕೊಡಗಿನಲ್ಲಿರುವಂತಾಗಿದೆ. ಅಲೆಮಾರಿಗಳಂತೆ ಕೊಡಗಿನಿಂದ ವಿಮುಖರಾಗುತ್ತಿರುವ ಯುವಪೀಳಿಗೆಯನ್ನು ಮತ್ತೆ ಕೊಡಗಿನತ್ತ ಕರೆತರುವ ಪ್ರಯತ್ನವಾಗಬೇಕೆಂದೂ ನಿರಂಜನ್ ಹೇಳಿದರು.

ಪತ್ರಿಕಾಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್ ಮಾತನಾಡಿ, ಸಾಮಾಜಿಕ ಚಿಂತನೆಯೊಂದಿಗೆ ಪತ್ರಿಕಾಭವನ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಅಕ್ಟೋಬರ್ ನಿಂದ ಪತ್ರಿಕಾಭವನ ಟ್ರಸ್ಟ್‌ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಸಮಾಜಮುಖಿಯಾಗಿರುವ ಅನೇಕ ಸಂಘಸಂಸ್ಥೆಗಳಿಗೆ ಪತ್ರಿಕಾಭವನ ಟ್ರಸ್ಟ್ ನೆರವಾಗುತ್ತಿದೆ ಎಂದು ರಮೇಶ್ ಹೇಳಿದರು.

ಪತ್ರಿಕಾಭವನ ಟ್ರಸ್ಟ್‌ನ ಟ್ರಸ್ಟಿ ಜಿ.ಚಿದ್ವಿಲಾಸ್ ಮಾತನಾಡಿ, ಹಳೇ ಕಾಲದಲ್ಲಿ ಯಾರಿಗಾದರೂ ದಾನ ಕೊಟ್ಟದ್ದು ಬೇರೆಯವರಿಗೆ ಗೊತ್ತಾಗಬಾರದು ಎಂಬ ಮನೋಭಾವವಿತ್ತು. ಆದರೆ, ಈಗಿನ ಕಾಲದಲ್ಲಿ ದಾನ, ಕೊಡುಗೆ ನೀಡಿದ್ದು ಸಾರ್ವಜನಿಕವಾಗಿ ತಿಳಿದಾಗ ಅಂಥ ದಾನಿಗಳಿಗೆ ತೃಪ್ತಿಯಾಗುತ್ತದೆಯಲ್ಲದೇ, ಇತರ ದಾನಿಗಳಿಗೂ ಕೊಡುಗೆ ನೀಡಲು ಪ್ರೇರಣೆಯಾಗುತ್ತದೆ. ವಿದ್ಯಾನಿಧಿ ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮ ಹೊಣೆಗಾರಿಕೆ ಹೆಚ್ಚಾಗಿದೆ ಎಂಬ ಮನೋಭಾವನೆಯಿಂದ ಶೈಕ್ಷಣಿಕ ಸಾಧನೆಯತ್ತ ಹೆಚ್ಚಿನ ಗಮನ ನೀಡಬೇಕೆಂದೂ ಚಿದ್ವಿಲಾಸ್ ಕರೆ ನೀಡಿದರು.

ಪತ್ರಿಕಾಭವನ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಮಾತನಾಡಿ, ಕಳೆದ ವರ್ಷ ಜಿಲ್ಲೆಯ ೩೬ ವಿದ್ಯಾರ್ಥಿಗಳಿಗೆ ೧.೬೦ ಲಕ್ಷ ರೂ. ವಿದ್ಯಾನಿಧಿ ವಿತರಿಸಿದ್ದ ಟ್ರಸ್ಟ್ ಎರಡನೇ ವರ್ಷದಲ್ಲಿ ೪೮ ವಿದ್ಯಾರ್ಥಿಗಳಿಗೆ ೨.೧೯ ಲಕ್ಷ ರುಪಾಯಿಗಳಷ್ಟು ವಿದ್ಯಾನಿಧಿಯನ್ನು ಹಂಚಿಕೆ ಮಾಡಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಭವನ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಪತ್ರಿಕಾಭವನ ಟ್ರಸ್ಟ್‌ನ ಟ್ರಸ್ಟಿಗಳಾದ ಎಚ್.ಟಿ.ಅನಿಲ್ ನಿರೂಪಿಸಿ, ಖಜಾಂಜಿ ಕೆ.ತಿಮ್ಮಪ್ಪ ಸ್ವಾಗತಿಸಿ, ಮುಲ್ಲೇಂಗಡ ಮಧೋಷ್ ಪೂವಯ್ಯ ವಂದಿಸಿದ ಕಾರ್ಯಕ್ರಮದಲ್ಲಿ ನವೀನ್ ಚಿಣ್ಣಪ್ಪ ಪ್ರಾರ್ಥಿಸಿದರು. ಟ್ರಸ್ಟಿಗಳಾದ ಶ್ರೀಧರ್ ಹೂವಲ್ಲಿ, ವಿ.ಪಿ.ಸುರೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net