ಗುರುವಿನ ಬಳಿ ಕಲಿತ ವಿದ್ಯೆ ಶ್ರೇಷ್ಠವಾದದ್ದು: ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಅಭಿಮತ

19
Published on

ಮೈಸೂರು: ಗುರು ಶಿಷ್ಯರ ಸಂಬಂಧ ಅನಾದಿ ಕಾಲದಿಂದಲೂ ಇದ್ದು, ಜ್ಞಾನದ ಭಂಡಾರವಾಗಿರುವ ಗುರುವಿನ ಬಳಿ ಕಲಿತ ವಿದ್ಯೆ ಶ್ರೇಷ್ಠವಾದದ್ದು ಎಂದು ಹಿರಿಯ ವಕೀಲ ಕೆ.ಆರ್. ಶಿವಶಂಕರ್ ಹೇಳಿದರು.
ದಕ್ಷಿಣಾಮ್ನಾಯ ಶ್ರೀಶಾರದ ಪೀಠ, ಶೃಂಗೇರಿ ಶಂಕರಮಠ ಅಭಿನವ ಶಂಕರಾಲಯ, ಶ್ರೀಗುರುರಾಘವೇಂದ್ರ ಸೇವಾ ಟ್ರಸ್ಟ್ ಮತ್ತು ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘ, ಜೀವಧಾರ ರಕ್ತ ನಿಧಿ ಕೇಂದ್ರ, ಎಎಸ್‌ಜಿ ಕಣ್ಣಿನ ಆಸ್ಪತ್ರೆಯಿಂದ ಗುರುಪೂರ್ಣಿಮೆ ಅಂಗವಾಗಿ ಟಿ.ಕೆ.ಲೇಔಟ್‌ನ ಶ್ರೀಗುರು ರಾಘವೇಂದ್ರಸ್ವಾಮಿ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಬೆಳಕು ಹರಿಸಿ ವ್ಯಕ್ತಿಯನ್ನು ಸುಜ್ಞಾನದ ಕಡೆ ಕೊಂಡೊಯ್ಯುವ ಮಹಾನ್ ದೈವ ಎಂದರೆ ಅದು ಗುರು. ಸನಾತನ ಧರ್ಮ ಸಂಸ್ಕೃತಿಯಲ್ಲಿ ತಂದೆ-ತಾಯಿ ನಂತರದ ಸ್ಥಾನವನ್ನು ಗುರುವಿಗೆ ನೀಡಲಾಗಿದೆ. ಕೇವಲ ಶಿಕ್ಷಣ ನೀಡಿದ ಗುರುಗಳಲ್ಲದೆ, ನಮಗೆ ಸನ್ಮಾರ್ಗ ನೀತಿ ಮತ್ತು ನಮ್ಮ ಏಳಿಗೆ ಬಯಸುವ ಪ್ರತಿಯೊಬ್ಬರೂ ಗುರುಗಳಾಗಿರುತ್ತಾರೆ. ಸ್ಥಳ, ಸಮಯ ಹಾಗೂ ವ್ಯಕ್ತಿ ಬದಲಾದರೂ ಗುರುವಿನ ಸ್ಥಾನ ಬದಲಾಗದು. ಗುರುವಿನ ಮಾರ್ಗದಲ್ಲಿ ನಡೆದು ಸುಜ್ಞಾನ ಬೆಳೆಸಿಕೊಂಡರೆ ಜೀವನ ಪಾವನವಾಗುತ್ತದೆ ಎಂದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಗೌರವಾಧ್ಯಕ್ಷ ಎಸ್.ಜಯರಾಮ್, ಅಧ್ಯಕ್ಷರು ಸುಬ್ಬರಾವ್, ಕಾರ್ಯದರ್ಶಿ ವಿಜಯ್ ಕುಮಾರ್, ಸಹ ಕಾರ್ಯದರ್ಶಿ ಪದ್ಮನಾಭ ರಾವ್, ಖಜಾಂಚಿ ನರಹರಿರಾವ್, ಸಂಘದ ಟ್ರಸ್ಟಿಗಳಾದ ಕೆ.ಆರ್.ಶಿವಶಂಕರ್, ಸತ್ಯಮೂರ್ತಿ, ಮುಕುಂದ, ಕೃಷ್ಣಮೂರ್ತಿ, ವೇಣುಗೋಪಾಲ್ ರಾವ್, ನರಸಿಂಹರಾಜು, ದ್ವಾರಕನಾಥ್, ಮುಕುಂದಾಚಾರ್, ನಂದನ್ ಇತರರು ಇದ್ದರು.
ನೂರಕ್ಕೂ ಹೆಚ್ಚು ಜನ ಕಣ್ಣಿನ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಂಡರು. 30 ಜನ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net