ರೋಗಮುಕ್ತ ದೇಶವಾಗಲು ಯೋಗ ಕಲಿಯಿರಿ

48
Published on

ಮೈಸೂರು: ಭಾರತ ರೋಗಮುಕ್ತ ದೇಶವಾಗಬೇಕಾದರೆ ಪ್ರತಿಯೊಬ್ಬರೂ ಯೋಗ ಕಲಿತು ಆರೋಗ್ಯವಂತರಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ತಿಳಿಸಿದರು.

ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ, ಹಿಮಾಲಯ ಪ್ರತಿಷ್ಠಾನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಕೆ.ಎಸ್.ಅಯ್ಯಂಗಾರ್ ಜಯಂತಿ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಯೋಗ ಕಲಿತಿದ್ದರಿಂದಲೇ ಡಾ. ರಾಜಕುಮಾರ್ ಆರೋಗ್ಯ ಕಾಪಾಡಿಕೊಂಡಿದ್ದರು. ನಟಿ ಶಿಲ್ಪಶೆಟ್ಟಿ ಸೇರಿದಂತೆ ಅನೇಕರು ಆರೋಗ್ಯ ಕಾಪಾಡಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿಯೂ ಯೋಗ ಶಿಬಿರಗಳು ನಡೆಯುತ್ತವೆ. ಯೋಗಕ್ಕೆ ಯಾವುದೇ ಜಾತಿ ಇಲ್ಲ, ಧರ್ಮವಿಲ್ಲ. ವಿದೇಶಿಯರೂ ಮೈಸೂರಿಗೆ ಬಂದು ಯೋಗ ಕಲಿಯುತ್ತಿದ್ದಾರೆ. ಯೋಗ ಮಾಡುವುದರಿಂದ ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಕ್ರಿಯಾಶೀಲವಾಗುತ್ತದೆ. ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿದ್ದು ಜ್ಞಾನವೂ ಹೆಚ್ಚಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯೋಗ ಕಲಿತು ಆರೋಗ್ಯವಂತರಾಗಿರಿ ಎಂದರು.

ಪ್ರಮತಿ ಶಿಕ್ಷಣ ಸಂಸ್ಥೆಯ ಎಚ್.ವಿ. ರಾಜೀವ್, ಸಂಘಟಕರಾದ ಡಾ.ಎಚ್.ಬಿ.ರಾಜಶೇಖರ್, ಕೆ.ಜಿ.ದೇವರಾಜ್, ಡಾ. ಬಿ.ಪಿ. ಮೂರ್ತಿ, ಡಾ. ಬಿ.ಶಾಂತರಾಂ, ಎಂ.ಬಿ. ಪಶುಪತಿ, ಎನ್.ಅನಂತ, ಯೋಗಕುಮಾರ್, ಬಿ.ರವಿ, ಬ್ಯಾಡರಹಳ್ಳಿ ಸೋಮಸುಂದರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net