

ಮೈಸೂರು: ವಿದ್ಯೆಯೊಂದಿಗೆ ಮಾನವೀಯ ಮೌಲ್ಯಗಳನ್ನೂ ಕಲಿಯುವುದು ಮುಖ್ಯ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ.ಬಿ.ಎನ್.ನಂದಿನಿ ಹೇಳಿದರು.
ನಗರದ ಎಂ.ಎಂ.ಕೆ. ಮತ್ತು ಎಸ್.ಡಿ.ಎಂ. ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮಾನವೀಯತೆ ಇಲ್ಲದ ವಿದ್ಯೆಯು ಮೌಢ್ಯಕ್ಕೆ ಸಮ. ಶೈಕ್ಷಣಿಕ ಪ್ರಗತಿಯೊಂದಿಗೆ ಆರ್ಥಿಕ ಬೆಳವಣಿಗೆಯೂ ಮುಖ್ಯವಾಗುತ್ತದೆ. ಆತ್ಮಸಾಕ್ಷಾತ್ಕಾರವೇ ಶಿಕ್ಷಣ. ಒಂದು ಹೆಣ್ಣು ಕಲಿತರೆ ಶಾಲೆಯೇ ತೆರೆದಂತೆ ಎಂಬ ನಾಣ್ನುಡಿ ಕಲಿಕೆಯ ಮಹತ್ವವನ್ನು ತಿಳಿಸುತ್ತದೆ. ವಿದ್ಯೆಯೊಂದಿಗೆ ಸರಳತೆ, ಪರೋಪಕಾರವೂ ಮುಖ್ಯ ಎಂದರು.
ವಿದ್ಯೆಯ ಹಂಬಲ ಇದ್ದವರು ಮೊಬೈಲ್ ಫೋನ್, ಟಿವಿ, ಸಾಮಾಜಿಕ ಜಾಲತಾಣಗಳಿಂದ ದೂರವಿರುವುದು ಅಗತ್ಯ. ಆಧುನೀಕರಣ, ನಗರೀಕರಣದಿಂದ ಆಗುವ ದುಷ್ಟಪರಿಣಾಮದ ಬಗ್ಗೆ ತಿಳಿಸಿದ ಅವರು, ವಿದ್ಯಾರ್ಥಿಗಳು ಜಾಗೃತರಾಗಿದ್ದರೆ ಮಾತ್ರ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಂ.ಮರಿಸ್ವಾಮಿ ಮಾತನಾಡಿ, ಪಿಯುಸಿ ಹಂತ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ್ದು. ಕಲಿಕೆಗೆ ಇಲ್ಲಿ ಪ್ರಾಮುಖ್ಯತೆ ನೀಡಬೇಕು ಎಂದರು.
ಸಂಸ್ಕಾರ ಕಲಿಸುತ್ತಾರೆ: ವಿದೇಶದಲ್ಲಿ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ, ದೇಶಪ್ರೇಮ ಇತ್ಯಾದಿ ತಿಳಿಸಿಕೊಡುತ್ತಾರೆ. ನಮ್ಮ ದೇಶದಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರದ ಮೌಲ್ಯವನ್ನು ತಿಳಿಸಿಕೊಡಲಾಗುತ್ತದೆ. ಗುರುಹಿರಿಯರ ಬಗ್ಗೆ ಗೌರವ ತೋರುವುದು ನಮ್ಮ ಸಂಸ್ಕೃತಿ ಎಂದರು.
ಸಾಮಾಜಿಕ ಮಾಧ್ಯಮಗಳನ್ನು ನಮ್ಮ ಬೆಳವಣಿಗೆಗೆ ಬಳಸಿಕೊಳ್ಳಬೇಕು. ದೇಶಕ್ಕಾಗಿ ಹೊರಾಡಿದ ಸ್ವಾತಂತ್ರ್ಯ ಹೋರಾಟಗಾರರ ಜೀವನ, ಸಾಧನೆ ಕೃತಿಗಳನ್ನು ಓದಬೇಕು ಎಂದರು.
ಎಂ.ಎಂ.ಕೆ. ಮತ್ತು ಎಸ್.ಡಿ.ಎಂ ಮಹಿಳಾ ವಿದ್ಯಾಲಯದ ಪ್ರಾಂಶುಪಾಲ ಪ್ರೊ. ಸಾಯಿನಾಥ್ ಮಲ್ಲಿಗೆಮಾಡು ಮಾತನಾಡಿ, ಜೀವನದ ತೊಡಕು ನಿವಾರಣೆಗೆ ಶಿಕ್ಷಣ ಅವಶ್ಯಕ. ಪಾಲಕರ ಪಾತ್ರವೂ ಇಲ್ಲಿ ಮುಖ್ಯ. ಅವಕಾಶಗಳನ್ನು ಹುಡುಕುವುದು ತಡವಾದರೂ ತಾಳ್ಮೆಗೆಡದೆ ಮುಂದುವರಿದರೆ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ವಿದ್ಯೆಯೆಂದರೆ ಕೇವಲ ಅಕ್ಷರ ಜ್ಞಾನ ಅಲ್ಲ. ಜೀವನಕ್ರಮವನ್ನು ನಿರಂತರವಾಗಿ ಕಲಿಯುವ ವಿಧಾನ ಎಂದರು.
ಪ್ರಾಂಶುಪಾಲರಾದ ನಯನಕುಮಾರಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸಿ.ಜಯಲಕ್ಷ್ಮಿ ಇತರರಿದ್ದರು.