ಕೌಶಲ ಕಲಿತು ಸ್ವಾವಲಂಬಿಗಳಾಗಿ

30 vikram 5
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೆಣ್ಣು ಮಕ್ಕಳು ಮನೆಯಿಂದ ಹೊರಬಂದು ಸ್ವಾವಲಂಬಿಗಳಾಗಲು ಕೌಶಲ ಅಗತ್ಯ. ಮಹಿಳೆಯರು ಛಲದಿಂದ ಕಲಿತು, ಸಂಕೋಚ ಬಿಟ್ಟು ಸವಾಲುಗಳನ್ನು ಎದುರಿಸಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಉಮಾ ಬಳ್ಳೊಳ್ಳಿ ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಅಂಗ ಸಂಸ್ಥೆಯ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರದಲ್ಲಿ ಏರ್ಪಡಿಸಿದ್ದ ಫ್ಯಾಷನ್ ಡಿಸೈನಿಂಗ್​ ಹಾಗೂ ಬ್ಯೂಟಿಷಿಯನ್​ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಕೌಶಲ ಕಲಿಯುವುದರಿಂದ ಸುಸೂತ್ರವಾಗಿ ಸಂಸಾರದ ನೊಗ ಎಳೆಯಬಹುದು. ಮನುಷ್ಯನಿಗೆ ಸವಾಲುಗಳು ಸಹಜ. ಅವುಗಳನ್ನು ಎದುರಿಸಿ ಸ್ವಾವಲಂಬಿ ಜೀವನ ನಡೆಸಲು ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ನಂತಹ ಸಂಸ್ಥೆಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವಂತಹ ಕಾರ್ಯ ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ಗೋಪಿಕಾ ಕರಿಕಟ್ಟಿ ಮಾತನಾಡಿ, ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ. ಹಣದ ಹಿಂದೆ ಬೀಳದೆ ಮೊದಲು ನಿಮ್ಮ ಕ್ಷೇತ್ರದಲ್ಲಿ ಹೆಸರುಗಳಿಸಲು ಮುಂದಾದಲ್ಲಿ ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.
ವರ್ಷಾ ಹಂಚಿನಮನಿ ಮಾತನಾಡಿ, ಹೆಣ್ಣು ಮಕ್ಕಳಿಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕಿ ಧೈರ್ಯದಿಂದ ಏನಾದರೂ ಮಾಡಬೇಕು ಎಂಬ ಛಲ ಬೆಳೆಸುವ ವೇದಿಕೆಯನ್ನು ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ನಿರ್ಮಾಣ ಮಾಡಿದೆ. ತರಬೇತಿ ಪಡೆದ ಹೆಣ್ಣು ಮಕ್ಕಳು ಪ್ರಮಾಣ ಪತ್ರಕ್ಕಷ್ಟೇ ಸೀಮಿತವಾಗದೆ, ಸ್ವಾವಲಂಬಿಗಳಾಗಲು ಇದನ್ನು ಮಟ್ಟಿಲಾಗಿ ಮಾಡಿಕೊಳ್ಳಿ ಎಂದರು.
ಲತಾ ಬಾಕಳೆ ಸ್ವಾಗತಿಸಿದರು. ಡಾ. ಗೋಪಾಲಕೃಷ್ಣ ಕಮಲಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕಾಂತ ಹಂಜಿ ನಿರೂಪಿಸಿದರು. ಲತಾ ಕ್ಯಾರಕೊಪ್ಪ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net