ಸ್ವಯಂ ರಕ್ಷಣೆಗೆ ಕರಾಟೆ ಕಲಿಯಿರಿ

jyp karate
ಜಯಪುರದಲ್ಲಿ ಕರಾಟೆ ತರಬೇತಿ ಸಮಾರೋಪದಲ್ಲಿ ಸ್ಪಂದನ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಪ್ರಸನ್ನಕುಮಾರ್ ಕಿಬ್ಳಿ, ಕೊಪ್ಪ ವೃತ್ತ ನಿರೀಕ್ಷಕ ಮಂಜುನಾಥ್, ಅಂಬರೀಶ್, ಆರ್.ಮಣಿಕಂಠ ಇತರರಿದ್ದರು.
Published on

ಜಯಪುರ: ಮೊಬೈಲ್ ಗೀಳಿನಿಂದ ಯುವ ಜನರು ಹೊರಬರಬೇಕು. ಕರಾಟೆ, ಕ್ರೀಡೆ, ಪುಸ್ತಕ ಓದುವಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಕೊಪ್ಪ ವೃತ್ತ ನಿರೀಕ್ಷಕ ಮಂಜುನಾಥ್ ಹೇಳಿದರು.

ಸೋಮವಾರ ಸ್ಪಂದನ ಸ್ವಯಂಸೇವಾ ಸಂಸ್ಥೆಯಿಂದ ನಡೆದ ಉಚಿತ ಕರಾಟೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಕರಾಟೆಯಂಥ ಆತ್ಮ ರಕ್ಷಣೆ ಕಲೆ ಕಲಿಯುವುದು ಅತ್ಯಗತ್ಯವಾಗಿದೆ. ಯಾವುದೋ ತುರ್ತು ಸನ್ನಿವೇಶಗಳಲ್ಲಿ ಉಪಯೋಗಕ್ಕೆ ಬರಲಿದೆ. ಜತೆಗೆ ಆತ್ಮ ವಿಶ್ವಾಸ ಬೆಳೆಸುತ್ತದೆ. ಉಚಿತವಾಗಿ ತರಬೇತಿ ನೀಡಿರುವುದು ಶ್ಲಾಘನೀಯ ಎಂದರು.
ಜಯಪುರ ಠಾಣಾಧಿಕಾರಿ ಅಂಬರೀಶ್ ಮಾತನಾಡಿ, ಸ್ಪಂದನ ಸಂಸ್ಥೆ ಬೇಸಿಗೆಯಲ್ಲಿ ಮಕ್ಕಳಿಗೆ ಕರಾಟೆ ಶಿಬಿರ ಆಯೋಜಿಸಿರುವುದು ಉತ್ತಮ ಕಾರ್ಯ. ಮಕ್ಕಳಿಗೆ ಶಿಕ್ಷಣ ಜತೆಗೆ ಇತರ ಚಟುವಟಿಕೆಯೂ ಅತ್ಯಗತ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಸ್ಪಂದನ ಸಂಸ್ಥೆ ಇನ್ನೂ ಹೆಚ್ಚಿನ ಕಾರ್ಯ ನಡೆಸಲಿ. ಅದಕ್ಕೆ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು. ಶಿಬಿರಾರ್ಥಿಗಳಿಗೆ ವಿಶೇಷ ಬಹುಮಾನ ನೀಡಿದರು.
ಸ್ಪಂದನ ಸಂಸ್ಥೆ ಅಧ್ಯಕ್ಷ ಪ್ರಸನ್ನಕುಮಾರ್ ಕಿಬ್ಳಿ ಮಾತನಾಡಿ, ಕಳವು, ದರೋಡೆಯಂತಹ ಕೃತ್ಯಗಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಸ್ವಯಂ ರಕ್ಷಣೆಗೆ ಕರಾಟೆ ಕಲಿಯುವುದು ಸೂಕ್ತ ಎಂದರು. ಕರಾಟೆ ಶಿಕ್ಷಕ ಆರ್.ಮಣಿಕಂಠ ಅವರನ್ನು ಸನ್ಮನಿಸಲಾಯಿತು. ಶಿಬಿರಾರ್ಥಿಗಳು ಆಕರ್ಷಕ ಕರಾಟೆ ಪ್ರದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net