

ಮೈಸೂರು: ಕನ್ನಡ ಭಾಷೆಯನ್ನು ಬಿಡಬೇಡಿ. ಅದುವೇ ಕನ್ನಡಿಗರೆಲ್ಲರ ಮೂಲ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ಲೇಖಕಿ, ರಾಜ್ಯಸಭಾ ಸದಸ್ಯೆ ಡಾ.ಸುಧಾ ಮೂರ್ತಿ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಕ್ರಾಫರ್ಡ್ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ವಿಶ್ವಕೋಶ-10 ಮತ್ತು 13ನೇ ಸಂಪುಟಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಗ್ಲಿಷ್ ಇದೀಗ ಅನಿವಾರ್ಯ. ಉದ್ಯೋಗಾವಕಾಶಕ್ಕಾಗಿ ಮತ್ತು ಬೇರೆ ರಾಜ್ಯ, ವಿದೇಶಗಳಲ್ಲಿ ತೆರಳಲು ಅದು ಅಗತ್ಯ, ನಿಜ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್‌ಗಾಗಿ ಕನ್ನಡವನ್ನು ಬಿಡಬೇಕೆಂದು ಎಲ್ಲಿಯೂ ಹೇಳಿಲ್ಲ. ಇಂಗ್ಲಿಷ್ ಕಲಿಯಿರಿ, ಕನ್ನಡ ಬಿಡಬೇಡಿ ಎಂದು ಹೇಳಿದರು.
ನಮ್ಮ ಮೂಲ ಹುಡುಕಾಟಕ್ಕೆ ಕನ್ನಡ ಭಾಷೆ ಬೇಕು. ಹೀಗಾಗಿ, ಇದನ್ನು ಬಿಡಬಾರದು. ಕನ್ನಡ ಪುಸ್ತಕ, ವಿಶ್ವಕೋಶಗಳನ್ನು ತೆಗೆದುಕೊಂಡು ಓದಬೇಕು. ಮಕ್ಕಳಿಗೂ ಓದುವ ಅಭ್ಯಾಸ ಮಾಡಿಸಿ. ತಾಯಂದಿರೂ ಓದಬೇಕು. ಇದು ನಿಮ್ಮ ಕರ್ತವ್ಯ ಎಂದರು.
ಕನ್ನಡ ಭಾಷೆಯದು ಜ್ಞಾನ ಸಂಗ್ರಹ ಪರಂಪರೆ. ಇದಕ್ಕೆ ಸಂವಾದ, ಚರ್ಚೆ, ವಿಶ್ಲೇಷಣಾತ್ಮಕ ಗುಣ ಇದೆ. ಅದನ್ನು ನಾವು ಕಳೆದುಕೊಳ್ಳಬಾರದು. ತಲತಲಾಂತರದಿಂದ ಬಂದಿರುವ ಈ ಕನ್ನಡ ಪರಂಪರೆಯನ್ನು ಮರೆಯಬಾರದು. ಇದುವೇ ನಿಜವಾದ ಆಸ್ತಿ. ಬಂಗಾರ, ಹಣ, ನಿವೇಶನವಲ್ಲ ಎಂದರು
.
ಬಳಿಕ ಸಂವಾದದಲ್ಲಿ ಮಾತನಾಡಿದ ಸುಧಾ ಮೂರ್ತಿ ಅವರು, ರಾಜಕೀಯ ಪ್ರಶ್ನೆ ಕೇಳಬೇಡಿ. ಅದಕ್ಕೆ ನನ್ನ ಬಳಿ ಉತ್ತರ ಇಲ್ಲ ಎಂದು ಹೇಳಿದರು.
ಉತ್ತಮ ಆಡಳಿತಗಾರನಿಗೆ ಪಾರದರ್ಶಕತೆ ಇರಬೇಕು, ಉತ್ತರದಾಯಿತ್ವವೂ ಮುಖ್ಯ. ಮಾತುಗಳು ಕೃತಿಯಾಗಬೇಕು. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳಬೇಕು. ಆಗ ಬೇರೆಯವರು ತಪ್ಪು ಮಾಡಿದಾಗ ಅದನ್ನು ಪ್ರಶ್ನಿಸಲು ಧೈರ್ಯ ಬರುತ್ತದೆ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಜೀವನವೇ ದೊಡ್ಡ ಪಾಠಶಾಲೆ. ಅದರಿಂದಲೇ ಪ್ರೇರಣೆ ಪಡೆದಿರುವೆ. ಅಹಂಕಾರವಿದ್ದರೆ ಬದುಕು ಕಷ್ಟಕರವಾಗುತ್ತದೆ. ಹೇಗೆ ಬರುತ್ತದೆಯೋ ಹಾಗೆಯೇ ಜೀವನವನ್ನು ಸ್ವೀಕರಿಸಬೇಕು. ನಾನು ಬಡವರಿಂದ ಕಲಿತಿರುವೆ, ಶ್ರೀಮಂತರಿಂದಲ್ಲ. ಬಡವರು ಸೌಜನ್ಯ, ಸ್ನೇಹಮಯಿಗಳು. ನನಗೆ ಶ್ರೀಮಂತರು ಮೋಸ ಮಾಡಿದ್ದಾರೆಯೇ ಹೊರತು, ಬಡವರು ಮಾಡಿಲ್ಲ ಎಂದು ಹೇಳಿದರು.
ನೈತಿಕವಾಗಿ, ಕಾನೂನಾತ್ಮಕವಾಗಿ ಸರಿ ಇದ್ದಾಗ ಬೇರೆಯವರು ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳಬಾರದು. ಜಗತ್ತಿನ ಬಾಯಿ ಮುಚ್ಚಿಸಲು ಆಗಲ್ಲ. ತಂದೆ-ತಾಯಿ-ಗುರುಗಳು ಏನು ಹೇಳುತ್ತಾರೆ ಎಂಬುದಷ್ಟೇ ಮುಖ್ಯ. ಅವರ ಮಾತಿಗಷ್ಟೇ ತೂಕ ಇದೆ ಎಂದರು.
ಹೊಸ ತಲೆಮಾರಿನವರು ಕೆಟ್ಟುಹೋಗಿದ್ದಾರೆ ಎಂಬ ಹಳೇ ತಲೆಮಾರಿನವರು ಹೇಳುತ್ತಾರೆ. ಆದರೆ, ಅದು ನಿಜವಲ್ಲ. ಹಳಬರಿಗೆ ಈಗಿನ ಯುವ ಜನರ ಸಂಘರ್ಷ, ಕಷ್ಟಗಳು ಅರ್ಥವಾಗಲ್ಲ. 1991ರ ಬಳಿಕ ಪಾಶ್ಚಿಮಾತ್ಯ ಸಂಸ್ಕೃತಿ ನುಸುಳಿದೆ. ಕೆಲವನ್ನು ಪಡೆದುಕೊಂಡು, ಕೆಲವೊಂದನ್ನು ಕಳೆದುಕೊಳ್ಳುತ್ತಿದ್ದೇವೆ. ಸ್ವೇಚ್ಛಾಚಾರಿಗಳು ಆಗಿದ್ದೇವೆ ಎಂದು ಹೇಳುತ್ತಾರೆ. ಅದು ಅಮೆರಿಕದಲ್ಲಿ ಸಾಮಾನ್ಯ ಸಂಗತಿ. ಪಾಶ್ಚಿಮಾತ್ಯ ಸಂಸ್ಕೃತಿ ಪ್ರವಾಹದ ನಡುವೆಯೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡು ಮುನ್ನಡೆಯಬೇಕು ಎಂದರು.
ಕೌಶಲವಿಲ್ಲದಿದ್ದರೆ ಎಷ್ಟೇ ಓದಿದ್ದರೂ ವ್ಯರ್ಥವೇ. ಕುಶಲತೆ ಇದ್ದರೆ ಉದ್ಯೋಗದಾತರಾಗಬಹುದು. ಇಲ್ಲವಾದರೆ, ಬೇರೆಯವರ ಬಳಿ ನೀವು ಉದ್ಯೋಗಿಯಾಗಿ ದುಡಿಯಬೇಕಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗಂಡಸರು ಸಹ ಅಡುಗೆ ಮನೆಗೆ ಬಂದು ಹೆಂಡತಿಯ ಕೆಲಸಕ್ಕೆ ಸಹಾಯ ಮಾಡಬೇಕು. ಪೈಪೋಟಿ ಯುಗದಲ್ಲಿ ಮಹಿಳೆ ಸಹ ಕೆಲಸ ಮಾಡುವುದು ಅನಿವಾರ್ಯ. ಆಕೆ ಹೊರ-ಒಳಗೂ ಕೆಲಸ ಮಾಡುವುದು ಕಷ್ಟಕರ. ಅದಕ್ಕಾಗಿ ಕುಟುಂಬದವರು ಸಹಕಾರ ನೀಡಬೇಕು ಎಂದು ಹೇಳಿದರು.
‘ವಿವಾಹ ಅನಿವಾರ್ಯವೇ?’ ಎಂಬ ವಿದ್ಯಾರ್ಥಿ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದ ಅವರು, ಸ್ವಸ್ಥ ಸಮಾಜ, ಶಿಸ್ತಿನ ಸಮಾಜ, ಶಾಂತಿಯುತ ಸಮಾಜ ನಿರ್ಮಾಣಕ್ಕಾಗಿ ಮದುವೆ ಅಗತ್ಯ. ವಿವಾಹದ ಖರ್ಚು ಅಗತ್ಯ ಇಲ್ಲ ಎಂದು ಚುಟುಕಾಗಿ ಹೇಳಿದರು.
ಕೃತಕಬುದ್ಧಿಮಂತೆ(ಎಐ), ರೋಬಾಟ್ ತಂತ್ರಜ್ಞಾನವು ಮಾನವರ ಮೇಲೆ ಸವಾರಿ ಮಾಡಬಹುದೇ ಎಂಬ ಆತಂಕ ನನಗೂ ಇದೆ. ಈ ಕುರಿತು ಸಂಶೋಧನೆಗಳು ನಡೆದಿವೆ.
ಮುಂದೇನು ಆಗಲಿದೆ ಎಂದು ಈಗಲೇ ಹೇಳಲಾಗದು. ಕಂಪ್ಯೂಟರ್ ಬಂದಾಗ ಹೀಗೆ ಆತಂಕ ಸೃಷ್ಟಿಯಾಗಿತ್ತು. ಅದು ಸುಳ್ಳಾಗಿ, ಇನ್ನಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾದವು. ಮನುಷ್ಯನ ಹೃದಯ, ನಿರ್ಧಾರ ಶಕ್ತಿ ಇರುವವರೆಗೂ ಏನೂ ಆಗಲ್ಲ ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳನ್ನು ನೋಡಲ್ಲ. ಅದಕ್ಕೆ ಉತ್ತರದಾಯಿತ್ವವೇ ಇಲ್ಲ. ಅಲ್ಲಿ ಏನು ಬೇಕಾದರೂ ಬರೆಯುತ್ತಾರೆ. ಹೀಗಾಗಿ, ನಾನು ಅದಕ್ಕಾಗಿ ಸಮಯ ಖರ್ಚು ಮಾಡಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೇದಿಕೆ ಮೇಲೆಯೇ ಮೈಸೂರು ವಿವಿ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಪ್ರೊ.ಕೆ.ಟಿ.ವೀರಪ್ಪ ಅವರ ಕಾಲಿಗೆ ಬಿದ್ದು ಡಾ.ಸುಧಾ ಮೂರ್ತಿ ನಮಸ್ಕರಿಸಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಭಿಕರು ಚಪ್ಪಾಳೆ ತಟ್ಟಿದರು.
ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ವಿ.ಆರ್.ಶೈಲಜಾ ಇದ್ದರು.