

ಅಳವಂಡಿ: ಇಂದಿನ ಮಕ್ಕಳೆ ನಾಳಿನ ಪ್ರಜೆಗಳು. ಅವರಿಗೆ ಶಿಕ್ಷಣ, ಜೀವಿಸುವ, ಭಾಗವಹಿಸುವ, ರಕ್ಷಣೆ ಪಡೆಯುವ ಹಕ್ಕಿದೆ ಎಂದು ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಪೆಲೋ ಸೌಜನ್ಯಾ ಹೇಳಿದರು.
ಗ್ರಾಮದ ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂನಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಗ್ರಾಪಂಗೆ ಭೇಟಿ ನೀಡಿ ಅದರ ಕಾರ್ಯ ಯೋಜನೆಗಳ ಬಗ್ಗೆ ತಿಳಿಯಬೇಕು. 2006ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿ ನಂತರ 18 ವರ್ಷದೊಳಗಿನ ಮಕ್ಕಳಿಗೆ ಓದುವ ಅವಕಾಶ ಹೆಚ್ಚಾಯಿತು. ಮಕ್ಕಳ ಸಮಸ್ಯೆ ಪರಿಹಾರಕ್ಕೆ 1098 ಹಾಗೂ ತುರ್ತು ಪರಿಸ್ಥಿತಿಗೆ 112 ಸಹಾಯವಾಣಿ ಇವೆ. ಮಕ್ಕಳು ಮಾನಸಿಕ ಕಿನ್ನತೆಗೆ ಒಳಗಾದಾಗ 14416ಕ್ಕೆ ಕರೆ ಮಾಡಿ ಪರಿಹಾರ ಪಡೆಯಬಹುದು. 16 ರಿಂದ 18 ವರ್ಷದ ಮಕ್ಕಳು ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವಂತಿಲ್ಲ ಎಂದು ತಿಳಿಸಿದರು.
ಸಿಆರ್‌ಪಿ ವಿಜಯಕುಮಾರ ಟಿಕಾರೆ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪಾಲಕರು ಮುಂದಾಗಬೇಕು. ಶಿಕ್ಷಕರು ಪಠ್ಯಕ್ಕೆ ಅನುಗುಣವಾಗಿ ಬೋಧಿಸಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನಿಸಬೇಕು. ಸರ್ಕಾರಿ ಶಾಲೆಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗಬೇಕು ಎಂದರು.
ಪಿಡಿಒ ಕೊಟ್ರಪ್ಪ ಅಂಗಡಿ ಮಾತನಾಡಿ, 15ನೇ ಹಣಕಾಸಿನ ಹಾಗೂ ಗ್ರಾಪಂ ಅನುದಾನದಲ್ಲಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು. ಚರಂಡಿ, ಶಾಲೆಯ ಕಾಂಪೌಂಡ್, ಕಟ್ಟಡ ಇತರ ಕಾಮಗಾರಿಗಳನ್ನು ನರೇಗಾದಡಿ ಹಂತ ಹಂತವಾಗಿ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗೀನ, ಪ್ರಮುಖರಾದ ಗುರುಬಸವರಾಜ ಹಳ್ಳಿಕೇರಿ, ಹನುಮಂತಪ್ಪ ಮೂಲಿಮನಿ, ನಜರುದ್ದೀನ್ ಬಿಸರಳ್ಳಿ, ಮಾರುತಿ, ಎಚ್.ಎನ್.ಲಮಾಣಿ, ನಾರಾಯಣ, ರಮೇಶ, ಶಿವಮೂರ್ತಿ, ದೇವೇಂದ್ರ, ಶ್ರೀದೇವಿ, ಅಶೋಕ್, ಗೋಪಾಲ, ನಾರಾಯಣಪ್ಪ, ಬಸವರಾಜ, ನೀಲಪ್ಪ ಹಕ್ಕಂಡಿ, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಕರು ಇತರರಿದ್ದರು.