

ಮಂಗಳೂರು: ನಗರದ ಮರೋಳಿ ಬಳಿ ಭಾನುವಾರ ಸಂಜೆ ಚಿರತೆಯೊಂದು ಓಡಾಡುವುದು ಕಂಡುಬಂದಿದೆ.
ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದು ಸಿಬ್ಬಂದಿ ಭೇಟಿ ನೀಡಿದ್ದಾರೆ. ಆ ಭಾಗದಲ್ಲಿ ಕೆಲವೊಂದು ಬೀಡಾಡಿ ನಾಯಿಗಳಿದ್ದು ಈಗ ಕಾಣುತ್ತಿಲ್ಲ, ಚಿರತೆ ಹಿಡಿದಿರಬಹುದು ಎಂದು ಸ್ಥಳೀಯರು ಹೇಳುತ್ತಾರೆ.
ಮರೋಳಿ ಪ್ರದೇಶದಲ್ಲಿ ಭಾನುವಾರ ಸಂಜೆ ವೇಳೆ ಚಿರತೆ ಕಾಣಿಸಿಕೊಂಡಿದೆ. ಅಲ್ಲಿನ ಮನೆಯೊಂದರ ಬಳಿ ಹೋಗುತ್ತಿದ್ದಾಗ ನೋಡಿದ ಹುಡುಗಿಯೊಬ್ಬಳು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ. ಆದರೆ ಉಳಿದಂತೆ ಯಾರಿಗೂ ಸರಿಯಾಗಿ ಗೋಚರಿಸಿಲ್ಲ.
ಚಿರತೆಯೋ ಕತ್ತೆ ಕಿರುಬವೋ?
ಸಂಜೆಯಾದ್ದರಿಂದ ಯಾರಿಗೂ ಈ ಪ್ರಾಣಿ ಸರಿಯಾಗಿ ಕಾಣಿಸಿಲ್ಲ, ವಿಡಿಯೋ ಕ್ಲಿಪ್ಪಿಂಗ್‌ನಲ್ಲು ಪ್ರಾಣಿಯ ಮುಖ ಸರಿಯಾಗಿ ಕಾಣುವುದಿಲ್ಲ, ಅದು ಕತ್ತೆಕಿರುಬ ಆಗಿರುವ ಸಾಧ್ಯತೆ ಜಾಸ್ತಿ, ಪಚ್ಚನಾಡಿ ಭಾಗದಲ್ಲಿ ಕತ್ತೆಕಿರುಬಗಳಿರುವುದು ಗಮನಕ್ಕೆಬಂದಿದೆ, ಅಲ್ಲಿಂದ ಮರೋಳಿಗೆ ಬಂದಿರುವ ಸಾಧ್ಯತೆ ಹೆಚ್ಚು ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ಹೇಳಿದ್ದಾರೆ