ಆಸಕ್ತಿ ಮೂಡಿಸಿದ ಬಿತ್ತಿಪತ್ರ ಪ್ರದರ್ಶನ: ನಗರದ ಮಹಿಳಾ ಕಾಲೇಜಿನಲ್ಲಿ ಆಯೋಜನೆ

Leaflet and coin exhibition Mandya
Published on

ಮಂಡ್ಯ: ನಗರದ ಸರ್ಕಾರಿ ಮಹಿಳಾ ಕಾಲೇಜಿ(ಸ್ವಾಯತ್ತ)ನಲ್ಲಿ ಇತಿಹಾಸ ವಿಭಾಗದಿಂದ ಆಯೋಜಿಸಿದ್ದ ಐತಿಹಾಸಿಕ ದಾಖಲೆಗಳ ಬಿತ್ತಿಪತ್ರ ಹಾಗೂ ನಾಣ್ಯ ಪ್ರದರ್ಶನ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಿತು.

ಚೋಳರ ಕಾಲದಿಂದ ಹಿಡಿದು ಇಂದಿನವರೆಗಿನ ನಾಣ್ಯಗಳ ಇತಿಹಾಸ, ವಿವಿಧ ಮಾದರಿಯ ನೋಟುಗಳು, ವಿದೇಶಿ ನೋಟು, ಚಿನ್ನ ಮತ್ತು ಬೆಳ್ಳಿಯ ನಾಣ್ಯ ಪ್ರದರ್ಶಿಸಲಾಯಿತು. 1940 ರಿಂದ ಪ್ರಸ್ತುತದವರೆಗೂ ಹಳೆಯ ವಾರಪತ್ರಿಕೆ, ದಿನಪತ್ರಿಕೆಗಳನ್ನು ಪ್ರದರ್ಶನಕ್ಕಿಡಲಾಯಿತು.

1947ರ ಸ್ವಾತಂತ್ರ್ಯ ದಿನಾಚರಣೆಯ ದಿನದ ಪತ್ರಿಕೆ, ಗಣರಾಜ್ಯ ದಿನದ ಪತ್ರಿಕೆ, ಕರ್ನಾಟಕ ಏಕೀಕರಣದ ಪತ್ರಿಕೆ ಸೇರಿದಂತೆ ಮೊದಲಾದ ಮಹತ್ವದ ದಿನದ ಪತ್ರಿಕೆಯ ಮುಖಪುಟವನ್ನು ವಿದ್ಯಾರ್ಥಿಗಳು ಕುತೂಹಲದಿಂದ ನೋಡಿದರು. ಅಂತೆಯೇ ಐತಿಹಾಸಿಕ ದಾಖಲೆಗಳಾದ ತಾಳೆಗರಿ ಹಾಗೂ ಕೋರ ಬಟ್ಟೆಯಿಂದ ನಿರ್ಮಿತವಾದ ಹಳೆಯ ದಾಖಲೆ ಪ್ರದರ್ಶಿಸಲಾಯಿತು. ಭಾರತದ ಇತಿಹಾಸದ ವಿವಿಧ ಮಾದರಿಗಳನ್ನು ಪೋಸ್ಟರ್‌ಗಳನ್ನು ರಚಿಸಿ ಅದರ ಮಹತ್ವವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಪ್ರದರ್ಶನಕ್ಕೆ ಚಾಲನೆ ನೀಡಿದ ನಾಣ್ಯ ಸಂಗ್ರಹಕಾರ ಮಧುಕರ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ಆರೋಗ್ಯಕರ ಹವ್ಯಾಸ ಬೆಳೆಸಿಕೊಳ್ಳುವುದರ ಮೂಲಕ ಇತಿಹಾಸದ ಬಗ್ಗೆ ಅಧ್ಯಯನ ಮಾಡಬೇಕು. ನಾಣ್ಯಗಳು ಆಯಾ ಕಾಲದ ಆರ್ಥಿಕ ಸ್ಥಿತಿಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯದ ಮೇಲೆ ಬೆಳಕು ಚೆಲ್ಲುತ್ತವೆ. ಇತಿಹಾಸವನ್ನು ಕಟ್ಟಲು ನಾಣ್ಯಗಳು ಪ್ರಾಥಮಿಕ ಆಧಾರಗಳಾಗುತ್ತವೆ. ಆದ್ದರಿಂದ ಇಂತಹ ವಿಶೇಷ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿವರಿಸಿದರು .

ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣೇಗೌಡ ಮಾತನಾಡಿ, ವೈಜ್ಞಾನಿಕ ತಳಹದಿಯ ಮೇಲೆ ಇತಿಹಾಸ ನಿಂತಿದೆ. ಆಧಾರಗಳು ಇಲ್ಲದೆ ಇತಿಹಾಸವನ್ನು ರಚಿಸಲು ಸಾಧ್ಯವಿಲ್ಲ. ಆದ್ದರಿಂದ ಹಳೆಯ ತಾಳೆಗರಿ, ಸ್ಮಾರಕ, ನಾಣ್ಯಗಳು ಮೊದಲಾದವುಗಳನ್ನು ಸಂರಕ್ಷಿಸ ಬೇಕಾಗಿದ್ದು ಇತಿಹಾಸ ವಿದ್ಯಾರ್ಥಿಗಳ ಪ್ರಮುಖ ಕರ್ತವ್ಯ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜಪ್ರಭು ಮಾತನಾಡಿ, ಇತಿಹಾಸವನ್ನು ಪುನರ್ ನಿರ್ಮಿಸುವಲ್ಲಿ ಮತ್ತು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವಲ್ಲಿ ವಿದ್ಯಾರ್ಥಿ ಯುವಕರ ಪಾತ್ರ ಮುಖ್ಯವಾಗಿದೆ ಎಂದರು.

ಹಿರಿಯ ಪ್ರಾಧ್ಯಾಪಕ ಡಾ.ಎಸ್.ಶಿವರಾಮು ಇತಿಹಾಸ ಕಟ್ಟುವಲ್ಲಿ ದಾಖಲೆಗಳ ಮಹತ್ವ ತಿಳಿಸಿದರು. ಇತಿಹಾಸ ವಿಭಾಗದ ಡಾ. ಕವಿತಾ, ಟಿ.ಎನ್.ಶಾಂತರಾಜು, ಭರತ್‌ರಾಜ್, ಕೆ.ಎ.ಪದ್ಮನಾಭ, ಕೆ.ಎಂ.ಪ್ರಸನ್ನ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net