6126 ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ತೀವ್ರ

20sirsi4- TP MEETING
Published on

ಶಿರಸಿ: ತಾಲೂಕಿನಲ್ಲಿ 6126 ಹೆಕ್ಟೇರ್ ಪ್ರದೇಶದಲ್ಲಿ ಎಲೆಚುಕ್ಕಿ ರೋಗ ತೀವ್ರವಾಗಿದೆ. ಈ ವರ್ಷ ಕೊಳೆ ರೋಗವೂ ಹೆಚ್ಚಿದ್ದ ಕಾರಣ ಅಡಕೆ ಮರದ ಸುಳಿ ಕೊಳೆತು ಸಾಯುವ ಸಾಧ್ಯತೆ ಇರುವುದರಿಂದ ರೈತರು ಎಚ್ಚರಿಕೆ ವಹಿಸಬೇಕಿದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹಾಗೂ ತಾಪಂ ಇಒ ಸತೀಶ ಹೆಗಡೆ ಹೇಳಿದರು.

ನಗರದ ತಾಪಂ ಸಭಾಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಎಲೆಚುಕ್ಕಿ ರೋಗ ತಡೆಗೆ ಬೆಳೆಗಾರರು ಸಾಮೂಹಿಕ ನಿಯಂತ್ರಣ ಕ್ರಮ ಅನುಸರಿಸಬೇಕಾಗಿದೆ. ವಾತಾವರಣದಲ್ಲಿನ ತೇವಾಂಶ ಕಡಿಮೆ ಆಗದ ಕಾರಣ ಎಲೆಚುಕ್ಕಿ ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಎಲೆಚುಕ್ಕಿ ರೋಗ ನಿಯಂತ್ರಿಸಲು ತೋಟದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು, ಶಿಫಾರಸು ಮಾಡಿದ ಪ್ರಮಾಣದಲ್ಲಿ ಗೊಬ್ಬರ ವಿತರಿಸಬೇಕು. ರೋಗಪೀಡಿತ ಎಲೆಗಳನ್ನು ತೋಟದಿಂದ ತೆಗೆದು ಸುಡಬೇಕು. ಪ್ರಸಕ್ತ ವರ್ಷದಿಂದ ಹನಿ ನೀರಾವರಿಗೆ ಶೇ. 90ರ ಸಹಾಯಧನ ಲಭ್ಯವಿದೆ. ಎಲ್ಲ ರೈತರು ಪ್ರಯೋಜನ ಪಡೆಯಬೇಕು’ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ಅಕ್ಟೋಬರ್ ತಿಂಗಳಲ್ಲಿ ಅಕಾಲಿಕ ಮಳೆಗೆ ಕಟಾವಿಗೆ ಬಂದ ಬೆಳೆ ಹಾನಿಯಾಗಿತ್ತು. 113 ಹೆಕ್ಟೇರ್ ಪ್ರದೇಶದ ಹಾನಿಯ ವರದಿ ನೀಡಲಾಗಿದೆ. ಕೃಷಿ ಭಾಗ್ಯ ಯೋಜನೆ ಮತ್ತೆ ಮಂಜೂರಾಗಿದ್ದು, ಶೇ. 90ರ ಸಹಾಯಧನದಲ್ಲಿ ಕೃಷಿ ಹೊಂಡ ನಿರ್ವಿುಸಿಕೊಳ್ಳಬಹುದು. ರೈತ ಆತ್ಮಹತ್ಯೆ 5 ಪ್ರಕರಣ, ಆಕಸ್ಮಿಕ ಸಾವು 5, ಗೊಣಬೆ ಹಾನಿ 9 ಪ್ರಕರಣದಡಿ ಪರಿಹಾರ ನೀಡಲಾಗಿದೆ. ಅತಿವೃಷ್ಟಿಯಿಂದ 171 ಹೆಕ್ಟೇರ್ ಹಾನಿ ಪರಿಹಾರ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಇಲಾಖೆ ಮಾಹಿತಿ ನೀಡಿದ ಡಾ. ಸೌಮ್ಯ ಎಸ್.ಪಿ., ತಾಲೂಕಿನ ವಿವಿಧೆಡೆ 11 ಆರೋಗ್ಯಾಧಿಕಾರಿಗಳು ಬೇಕು, ಆದರೆ, ಮೂರು ಜನ ಕಾಯಂ ಹಾಗೂ ಇಬ್ಬರು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದೆಡೆ ಖಾಲಿ ಇವೆ ಎಂದರು. ಪ್ರಸ್ತುತ ವಾತಾವರಣದ ಕಾರಣಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ. ಬಿ.ಪಿ. ಸತೀಶ್, ಸೀತಾರಾಮ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net