ಅಡಕೆಗೆ ಎಲೆ ಚುಕ್ಕಿ, ಭತ್ತಕ್ಕೆಬೆಂಕಿ ರೋಗ

26sri-1
ಶೃಂಗೇರಿ ತಾಲೂಕಿನ ಕೂಡ್ಲಮಕ್ಕಿಯಲ್ಲಿ ಭತ್ತದ ಸಸಿಗೆ ಕಾಣಿಸಿಕೊಂಡ ಬೆಂಕಿರೋಗ.
Published on

ಶೃಂಗೇರಿ: ತಾಲೂಕಿನಲ್ಲಿ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಮುಂತಾದ ರೋಗಗಳಿಂದ ತತ್ತರಿಸಿದ ರೈತರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಡಕೆ ರೋಗ ಹೆಚ್ಚಾಗಿದ್ದರಿಂದ ಈ ಬಾರಿ ಹೆಚ್ಚಿನ ಆಸಕ್ತಿಯಿಂದ ಸಸಿಮುಡಿ ತಯಾರಿಸಿ ಭತ್ತದ ನಾಟಿಗೆ ಮುಂದಾಗಿದ್ದರು. ಆದರೆ ಮಳೆ ಬಾರದಿರುವುದು ಹಾಗೂ ರೋಗ ಭಾದೆ ರೈತರನ್ನು ಆತಂಕಕ್ಕೆ ದೂಡಿದೆ.
ಈ ಬಾರಿ ಹೆಚ್ಚಿನ ರೈತರು ಭತ್ತದ ಕೃಷಿ ಬಗ್ಗೆ ಆಸಕ್ತಿ ತೋರಿಸಿ ಲಭ್ಯವಿರುವ ಅಲ್ಪಸ್ವಲ್ಪ ನೀರಿನ ಮೂಲದಿಂದ ನಾಟಿ ಮಾಡಿದ್ದರು.ಉತ್ತಮ ಇಳುವರಿ ಬರುವ ನಿರೀಕ್ಷೆ ಕೂಡಾ ಹೊಂದಿದ್ದರು. ಆದರೆ ನಾಟಿ ಮಾಡಿರುವ ಸಸಿಗೆ ಎಲೆಕಟ್ಟೆ ಹಾಗೂ ಬೆಂಕಿರೋಗ ಹರಡುತ್ತಿದೆ.
ಏನಿದು ಬೆಂಕಿ ರೋಗ ?: ಭತ್ತದ ಸಸಿಯ ಎಲೆಯ ಮೇಲೆ ತಿಳಿಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಸಸಿಗರಿಗಳು ಸುಟ್ಟುಹೋದಂತೆ ಒಣಗುತ್ತದೆ. ರೋಗ ತೀವ್ರವಾದಂತೆ ಚುಕ್ಕೆಗಳು ಹೆಚ್ಚಾಗಿ ಸಸಿಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡು ಒಣಗಲು ಕಾರಣವಾಗುತ್ತದೆ. ಕಾಳು ಕಟ್ಟುವ ಮೊದಲೇ ಸಸಿ ಬುಡಭಾಗಕ್ಕೆ ಬಾಗಿಬೆಳೆ ನಷ್ಟವಾಗುತ್ತದೆ. ಮಳೆ ಸುರಿದರೆ ಮಾತ್ರ ರೋಗ ನಿಯಂತ್ರಣಕ್ಕೆ ಬರಲು ಸಾಧ್ಯ. ಇಲ್ಲವಾದಲ್ಲಿ ಭತ್ತದ ಕಾಳುಟೊಳ್ಳಾಗಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ.
ನಿಯಂತ್ರಣ ಹೀಗೆ: ಹವಾಮಾನ ವೈಪರೀತ್ಯದಿಂದ ಭತ್ತದ ಪೈರಿಗೆ ಬೆಂಕಿರೋಗ ಕಾಣಿಸಿಕೊಂಡಿದೆ.ಗದ್ದೆಯಲ್ಲಿ ಆವರಿಸಿರುವ ಕಳೆಯನ್ನು ಸ್ವಚ್ಛಗೊಳಿಸಬೇಕು.ಸಾವಯವ ಕೃಷಿ ಪದ್ಧತಿ ರೂಢಿಸಿಕೊಂಡವರು ಒಂದು ಲೀಟರ್ ಹುಳಿ ಮಜ್ಜಿಗೆಯನ್ನು 10 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು. ರಾಸಾಯನಿಕ ಸಿಂಪರಣೆಗಾಗಿ ಒಂದು ಲೀಟರ್ ನೀರಿಗೆ ಒಂದು ಗ್ರಾಂ ಕಾರ್ಬನ್ ಡೈಜಿಯಮ್, 50 ಡಬ್ಲೂಪಿ ಅಥವಾ ಒಂದು ಮಿಲೀ ಎಡಿಫಿನ್‌ಾಸ್ 50 ಇಸಿ ಅಥವಾ 1 ಮಿಲೀ ಕೀಟಾಜಿನ್ 40 ಇಸಿ ಬಳಸಬಹುದು.ರೋಗ ತೀವ್ರತೆ ಇದ್ದಲ್ಲಿ 20-25 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು ಎಂದು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಡಾ.ಜಕಾತಿಮಠ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net