

ಆಲೂರು : ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ಕಲಿಸಿಕೊಡುತ್ತದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಲಯನ್ಸ್ ಕ್ಲಬ್ ಭವನದಲ್ಲಿ ಶನಿವಾರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅರಕಲಗೂಡು ವರದರಾಜು ಕಾಂತಮ್ಮ ಪದವಿಪೂರ್ವ ಕಾಲೇಜು ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಸಾಮಾಜಿಕ ಸೇವಾಗುಣ, ನಾಯಕತ್ವ ಗುಣ, ಸಹಬಾಳ್ವೆ, ಸಮುದಾಯ ಅಭಿವೃದ್ಧಿ, ವ್ಯಕ್ತಿತ್ವ ವಿಕಸನ, ಸಂಘಟನೆ, ಮಾನವೀಯ ಗುಣ, ಶ್ರಮದಾನದಂತಹ ಅನೇಕ ಮೌಲ್ಯಗಳನ್ನು ಕಲಿಸಿಕೊಡುತ್ತವೆ. ವಿದ್ಯಾರ್ಥಿಯ ಜೀವನದಲ್ಲಿಯೇ ಆದರ್ಶಗಳನ್ನು ರೂಡಿಸಿಕೊಳ್ಳಲು ಅನುಕೂಲವಾಗಿವೆ ಎಂದರು.
ಅರಕಲಗೂಡು ವರದರಾಜು ಕಾಂತಮ್ಮ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿ, ಯುಪೀಳಿಗೆಯು ಗ್ರಾಮಗಳನ್ನು ಸ್ವಚ್ಛ ಮತ್ತು ಸುಂದರ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಬೇಕು. ನೈರ್ಮಲ್ಯ, ಆರೋಗ್ಯ, ಶಿಕ್ಷಣದ ಬಗೆಗೆ ಗ್ರಾಮೀಣ ಭಾಗದ ಜನರಲ್ಲಿ ಅರಿವು ಮೂಡಿಸಲು ಶಿಬಿರಾರ್ಥಿಗಳು ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಉಪನ್ಯಾಸಕ ಮಂಜೇಗೌಡ, ಉದ್ಯಮಿ ಚಂದ್ರು, ಲಯನ್ಸ್ ಕ್ಲಬ್ ಸದಸ್ಯರಾದ ಪ್ರವೀಣ್, ರಾಜಣ್ಣ ಬಿ. ಜೆ.ಪಿ ಮುಖಂಡರಾದ ರುದ್ರೇಗೌಡ, ಅಬ್ಬನಕೃಷ್ಣಮೂರ್ತಿ, ಅಜಿತ್, ಲೊಕೇಶ್, ಹನುಮಂತೇಗೌಡ, ಜೆ.ಸಿ.ಬಿ ರವಿ ಇತರರು ಇದ್ದರು.