

ವಿಜಯಪುರ: ಎನ್‌ಎಸ್‌ಎಸ್ ಎಂದರೆ ಕೇವಲ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವುದಲ್ಲ. ಬದಲಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ವ್ಯಕ್ತಿತ್ವ ಬೆಳೆಸುವಲ್ಲಿ ಸಹಾಯಕಾರಿಯಾಗಿದೆ ಎಂದು ಎನ್‌ಎಸ್‌ಎಸ್‌ನ ಸಂಯೋಜಕ ಡಾ. ಅಶೋಕಕುಮಾರ ಸುರಪುರ ಹೇಳಿದರು.
ತಿಕೋಟಾ ತಾಲೂಕಿನ ಅರಕೇರಿ ಗ್ರಾಮದ ಅಮೋಘಸಿದ್ಧೇಶ್ವರ ದೇವಸ್ಥಾನದಲ್ಲಿ ಬಿಎಲ್‌ಡಿಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ, ಎನ್‌ಎಸ್‌ಎಸ್ ಘಟಕ-1 ಮತ್ತು ಘಟಕ-2 ರ ಸಹಯೋಗದಲ್ಲಿ 2024-25ನೇ ಸಾಲಿನ ರಾಷ್ಟ್ರೀಯ ಸೇವಾ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಎಸ್‌ಎಸ್ ಪ.ಪೂ. ಕಾಲೇಜಿನ ಪ್ರಾಚಾರ್ಯ ಡಾ. ಜಿ.ಡಿ. ಅಕಮಂಚಿ ಮಾತನಾಡಿ, ಯುವಜನತೆ ಸೇವಾ ಮನೋಭಾವನೆ ಬೆಳೆಸಿಕೊಂಡರೆ ರಾಷ್ಟ್ರದ ಅಭಿವೃದ್ಧಿ ಖಚಿತ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸವಿತಾ ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸುಧಾ ಕಟ್ಟಿ ಪ್ರಾರ್ಥಿಸಿದರು. ರೇಖಾ ಗಡಗಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕೆಂಗನಾಳ ನಿರೂಪಿಸಿದರು. ವಿದ್ಯಾರ್ಥಿನಿ ಪ್ರಿಯಾ ಮೇಲ್ಕುಂದಿ ತಂಡದವರು ಎನ್‌ಎಸ್‌ಎಸ್ ಗೀತೆ ಹಾಡಿದರು. ವಿ.ಎಸ್. ನಂದೇಶ ವಂದಿಸಿದರು.
ದೇವಸ್ಥಾನದ ಅರ್ಚಕ ಬಿ.ಎಸ್. ಒಡೆಯರ, ಡಾ. ಎ.ಟಿ. ಶ್ರೀನಿವಾಸ, ಪಿ.ಎಸ್. ತೊಳನೂರ, ಡಾ. ಕೆ.ಎ. ಪಾಟೀಲ, ಡಾ. ಬಿ.ವಿ. ಪಾಟೀಲ, ಗುರುರಾಜ ಕುಲಕರ್ಣಿ ಮತ್ತಿತರರಿದ್ದರು.