ಬೋಟ್‌ನಲ್ಲಿ ವಿಹರಿಸಿದ ನಾಯಕರು

h9-Toalankere 2
Published on

ಹುಬ್ಬಳ್ಳಿ: ಇಲ್ಲಿಯ ತೋಳನಕೆರೆಗೆ ಬಂದಿದ್ದ ನಾಯಕರು, ಬೋಟ್‌ನಲ್ಲಿ ಓಡಾಡಿದರು. ಕುದುರೆ ಹತ್ತಿದರು. ಟಾಯ್ ಟ್ರೇನ್ ಹತ್ತಿದರು. ಸುತ್ತಲಿದ್ದ ಕಾರ್ಯಕರ್ತರು ಜೈಕಾರ ಮೊಳಗಿಸಿದರು.
ಪ್ರಕೃತಿ ಫೌಂಡೇಷನ್ ಹಾಗೂ ಚೈತನ್ಯ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ತೋಳನಕೆರೆ ಹೊರಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಾಟರ್ ಸ್ಪೋರ್ಟ್ಸ್, ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಂಡುಬಂದ ದೃಶ್ಯಗಳಿವು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಮೇಯರ್ ವೀಣಾ ಬರದ್ವಾಡ ಇತರರು ಆಗಮಿಸಿದ್ದರು. ಬೋಟ್ ಉದ್ಘಾಟಿಸಿದ ನಂತರ ಬೋಟ್‌ನಲ್ಲಿ ವಿಹರಿಸಿದರು. ನಂತರ ಉದ್ಘಾಟಿಸಿದ ಪ್ರಲ್ಹಾದ ಜೋಶಿ, ಸಮಯ ವಿಳಂಬವಾಗಿದೆ. ನಾನು ದೆಹಲಿಗೆ ತೆರಳಬೇಕು. ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದು ಚುಟುಕಾಗಿ ಮಾತನಾಡಿ ಹೊರಬಂದರು. ನಂತರ ಅಲ್ಲಿಯೇ ಇದ್ದ ಕುದುರೆ ಏರಿದರು. ನಂತರ ಟಾಯ್ ಟ್ರೇನ್ ಹತ್ತಿ ಓಡಾಡಿ ತಮ್ಮ ಕಾರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು.
ಜನಾಂದೋಲನ ಅಗತ್ಯ: ತೋಳನಕೆರೆಗೆ ಚರಂಡಿ ನೀರು ಹರಿದುಬರುತ್ತಿದೆ. ಇದರ ನಿಯಂತ್ರಣಕ್ಕೆ ಜನಾಂದೋಲನ ಮಾಡುವ ಅಗತ್ಯವಿದೆ. ಹೀಗಾಗಿ ಶೀಘ್ರವೇ ಶಾಸಕರು, ಅಧಿಕಾರಿಗಳ ಸಭೆ ಕರೆದು ಸ್ವಚ್ಛತೆಗೆ ಸೂಚಿಸುವರು. ಜನರು ಕೂಡ ಸ್ವಚ್ಛತೆಗೆ ಆದ್ಯತೆ ನೀಡುವ ಕುರಿತು ತಿಳಿವಳಿಕೆ ಮೂಡಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್‌ಸಿಟಿ ಯೋಜನೆಯಡಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಇನ್ನಷ್ಟು ಆಗಬೇಕು. ಇದಕ್ಕೆ ಜನರ ಸಹಕಾರ ಕೂಡ ಅಗತ್ಯ. ಕ್ರೀಡಾ ಚಟುವಟಿಕೆ, ಮನೋರಂಜನೆ ಜತೆಗೆ ಸ್ವಚ್ಛತೆ ಬಗ್ಗೆ ಜನರು ಜಾಗೃತಿ ಹೊಂದಬೇಕು ಎಂದರು.
ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ, ಶಿವು ಮೆಣಸಿನಕಾಯಿ, ಗುತ್ತಿಗೆದಾರ ಪರಶುರಾಮ ಪೂಜಾರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net