

ಬುಕ್ಕಾಪಟ್ಟಣ : ಬುಕ್ಕಾಪಟ್ಟಣ ನಾಯಕ ಸಮುದಾಯದ ಶಕ್ತಿ ಕೇಂದ್ರ ಎಂದು ಶಿರಾ ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಬಂಡೆ ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು.
ಅ.18ರಂದು ಶಿರಾ ತಾಲೂಕಿನಲ್ಲಿ ಹಮ್ಮಿಕೊಂಡಿರುವ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಸುತ್ಸವ ಕುರಿತಂತೆ ಬುಕ್ಕಾಪಟ್ಟಣದ ಉದ್ಭವ ಗಣಪತಿ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬುಕ್ಕಾಪಟ್ಟಣ ಹೋಬಳಿಯಲ್ಲಿ ಅತಿ ಹೆಚ್ಚು ಜನಸಂಖ್ಯೆಯಲ್ಲಿ ನಾಯಕ ಸಮುದಾಯದವರಿದ್ದು, ಶಿರಾ ತಾಲೂಕು ನಾಯಕ ಸಮುದಾಯದ ಶಕ್ತಿ ಕೇಂದ್ರವಾಗಿದೆ. ನಾಯಕ ಸಮುದಾಯ ಅತ್ಯಂತ ಹಿಂದುಳಿದ ತಳ ಸಮುದಾಯವಾಗಿದ್ದು, ಶೈಕ್ಷಣಿಕ, ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ನಾಯಕ ಸಮುದಾಯದ ನಾಗೇಂದ್ರ ಹಾಗೂ ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟು ನಮ್ಮಗಳ ಧ್ವನಿ ಅಡಗಿಸುವ ಕೆಲಸವನ್ನು ಈಗಿನ ಸರ್ಕಾರ ಮಾಡುತ್ತಿದ್ದು ವಾಲ್ಮೀಕಿ ಸಮುದಾಯ ಇದಕ್ಕೆ ತಕ್ಕ ಉತ್ತರ ನೀಡಲಿದೆ ಎಂದರು.
ಶಿರಾ ನಗರಸಭೆ ಸದಸ್ಯ ಅಜಯ್ ಕುಮಾರ್ ಮಾತನಾಡಿ, ವಾಲ್ಮೀಕಿ ಸಮುದಾಯ ಸಂಘಟಿತರಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳುವ ಕೆಲಸ ಮಾಡಬೇಕು. ನಮ್ಮ ಸಮುದಾಯದ ಯಾರೊಬ್ಬರಿಗೆ ಅನ್ಯಾಯವಾದರೂ ಧ್ವನಿ ಎತ್ತಿ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅ.18ರಂದು ಶಿರಾ ನಗರದಲ್ಲಿ ನಡೆಯುವ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಒಗ್ಗಟ್ಟಿನಿಂದ ಮುನ್ನಡೆಸಬೇಕು ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಗುರುರಾಜು, ಕಾಂತರಾಜು, ಮುಖಂಡರಾದ ಶಿವು, ಜಾನಕಲ್ ಗಂಗಾಧರ್, ತಿಪ್ಪೇಶ್, ರಾಜಣ್ಣ, ಶ್ರೀರಂಗಪ್ಪ, ಜಗನ್ನಾಥ್, ರಂಗನಾಥ್, ಶಿವಕುಮಾರ್, ಪ್ರಕಾಶ್, ತಿಪ್ಪೇಸ್ವಾಮಿ, ಶೇಖರ್, ವಿಜಯ, ಶಂಕರ್, ಮುದ್ದರಾಜು, ರವಿಕುಮಾರ್, ಲಕ್ಷ$್ಮಣ ಮತ್ತಿತರರು ಇದ್ದರು.