ಸಮುದಾಯದ ಮುಖಂಡರು ಎಚ್ಚರವಹಿಸಿ

meeting
ಸಿಂಧನೂರಿನ ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಸರ್ಕೀಟ್‌ಹೌಸ್‌ನಲ್ಲಿ ಮಂಗಳವಾರ ಆರ್.ಎಚ್.ಕ್ಯಾಂಪ್-2 ರಲ್ಲಿ ನಡೆದ ಘಟನೆಗೆ ಸಬಂಧಿಸಿದಂತೆ ನಡೆದ ಶಾಂತಿ ಸಭೆಯಲ್ಲಿ ಸಿಪಿಐ ರವಿಕುಮಾರ ಕಪ್ಪತ್ತನವರ್ ಮಾತನಾಡಿದರು. ಡಿವೈಎಸ್‌ಪಿ ವೆಂಕಟಪ್ಪ ನಾಯಕ, ತಹಸೀಲ್ದಾರ್ ಅರುಣ ದೇಸಾಯಿ, ಕೆ.ಕರಿಯಪ್ಪ, ಬಸವರಾಜ ನಾಡಗೌಡ ಇದ್ದರು.
Published on

ಸಿಂಧನೂರು: ಆರ್.ಎಚ್.ಕ್ಯಾಂಪ್ ಸೇರಿ ಎಲ್ಲಿಯೂ ಶಾಂತಿ ಕದಡಲು ಅವಕಾಶ ನೀಡುವುದಿಲ್ಲ. ಎಲ್ಲರೂ ಸಹೋದರರಂತೆ ಬಾಳಬೇಕು ಎಂದು ಡಿವೈಎಸ್‌ಪಿ ವೆಂಕಟಪ್ಪ ನಾಯಕ ತಿಳಿಸಿದರು.

ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಸರ್ಕಿಟ್‌ಹೌಸ್‌ನಲ್ಲಿ ಮಂಗಳವಾರ ಆರ್.ಎಚ್.ಕ್ಯಾಂಪ್-2 ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ಶಾಂತಿ ಸಭೆಯಲ್ಲಿ ಮಾತನಾಡಿದರು.

ಸಿಂಧನೂರಿನಲ್ಲಿ ಇಂಥ ಘಟನೆ ನಡೆಯಬಾರದು. ಇಲ್ಲಿ ಹಿಂದು-ಮುಸ್ಲಿಂ ಸಹೋದರರಂತಿದ್ದಾರೆ. ಇಲ್ಲಿಯವರೆಗೆ ಯಾವುದೇ ಕೋಮುಗಲಭೆಯಾಗಿಲ್ಲ. ಮುಂದೆಯೂ ಆಗಬಾರದು. ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಎಚ್ಚರವಹಿಸಬೇಕು. ಇಲ್ಲಿಗೆ ಈ ಘಟನೆ ಶಾಂತಿಗೊಳಿಸೋಣ. ಎಲ್ಲಾ ಸಮುದಾಯ ಪೊಲೀಸ್ ಇಲಾಖೆ ಜತೆಗೆ ಕೈಜೋಡಿಸಿದರೆ, ಯಾವುದೇ ತಂಟೆ-ತಕರಾರು ನಡೆಯುವುದಿಲ್ಲ ಎಂದರು.

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ

ಸಿಪಿಐ ರವಿಕುಮಾರ ಕಪ್ಪತ್ತನವರ್ ಮಾತನಾಡಿ, ಯಾವುದೇ ಘಟನೆ ಇರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ಕ್ಷಲ್ಲಕ ಜಗಳಗಳಿಗೆ ಅವಕಾಶ ನೀಡಬಾರದು. ಏನಾದರೂ ಇದ್ದರೂ, ಸಮುದಾಯದ ಮುಖಂಡರು ಮುತುವರ್ಜಿವಹಿಸಿ ಬಗೆಹರಿಸಿಕೊಳ್ಳಬೇಕು ಎಂದರು. ತಹಸೀಲ್ದಾರ್ ಅರುಣ ದೇಸಾಯಿ ಮಾತನಾಡಿ, ಎಲ್ಲಾ ಸಮುದಾಯದವರು ಸಹೋದರರಂತೆ ಜೀವನ ಮಾಡಬೇಕು. ಶಾಂತಿಗೆ ಭಂಗ ಉಂಟಾಗಬಾರದು ಎಂದರು. ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಾಫರ್ ಜಹಗೀರದಾರ, ರಫ್ತಾನ್ ಸರ್ದಾರ್, ಪ್ರಮುಖರಾದ ಕೆ.ಕರಿಯಪ್ಪ, ಬಸವರಾಜ ನಾಡಗೌಡ, ಬಾಬರಪಾಷಾ ವಕೀಲ, ಮುಸ್ಲಿಂ ಹಾಗೂ ಬಂಗಾಲಿ ಸಮುದಾಯದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net