ಬಿಜೆಪಿ ನಾಯಕರಿಂದ ಅಲ್ಪಸಂಖ್ಯಾತರ ಟಾರ್ಗೆಟ್ - ಬಿ.ಕೆ. ಹರಿಪ್ರಸಾದ್

0102
Published on

ಬೆಳಗಾವಿ: ದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದರೆ ಅದಕ್ಕೆ ಅಲ್ಪಸಂಖ್ಯಾತರನ್ನೇ ಟಾರ್ಗೆಟ್ ಮಾಡುವುದು ಬಿಜೆಪಿಯ ಫ್ಯಾಶನ್ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಲಬುರಗಿಯಲ್ಲಿ ಸಾವಿರಾರು ಕೆಜಿ ಗಾಂಜಾ ಸಾಗಣೆ ವೇಳೆ ಬಂಧಿತ ನಾದ ವ್ಯಕ್ತಿ ಯಾವ ಪಕ್ಷದ ನಾಯಕ? ಯಾವ ಧರ್ಮಕ್ಕೆ ಸೇರಿದವನು ಎಂಬ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಗಾಂಜಾ ಪ್ರಕರಣದಲ್ಲಿ ಗಂಡಸರಿಲ್ಲವೇ?: ಕರೊನಾ ತಡೆಗಟ್ಟುವಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರ ವೈಫಲ್ಯ ಮುಚ್ಚಿಹಾಕಲು ಡ್ರಗ್ಸ್ ದಂಧೆ ಹೆಸರಲ್ಲಿ ರಿಯಾ ಚಕ್ರವರ್ತಿ, ಕಂಗನಾ ಅವರ ಹೆಸರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಸಂಜನಾ, ರಾಗಿಣಿ ಅವರಂತಹ ಸೆಲೆಬ್ರಿಟಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ.

ಸರ್ಕಾರ ಬರೀ ಹೆಣ್ಣು ಮಕ್ಕಳ ಹೆಸರು ಹೇಳುತ್ತಿದೆ. ಹಾಗಾದ್ರೆ, ಗಂಡಸರು ಅಫೀಮು, ಗಾಂಜಾ ತೆಗೆದುಕೊಳ್ಳುವುದಿಲ್ಲವೇ? ಬಿಜೆಪಿಯ ಡೊಡ್ಡ ನಾಯಕರು ಅಫೀಮು ತೆಗೆದುಕೊಳ್ಳದೆ ಹೊರ ಬರುತ್ತಿರಲಿಲ್ಲ. ಎಲ್ಲವೂ ನನಗೆ ಗೊತ್ತಿದೆ. ಹೆಸರು ಹೇಳುವುದಿಲ್ಲ ಎಂದು ಹೇಳಿದರು.

ಆರ್‌ಎಸ್‌ಎಸ್ ವಿರುದ್ಧ ಕಿಡಿ: ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೇಳಿ ಬರುತ್ತಿದೆ. ಬರೀ ಜಮೀರ್ ಅಹ್ಮದ್ ಅಷ್ಟೇ ಅಲ್ಲ, ಬಿಜೆಪಿಯ ಧರ್ಮಗ್ರಂಥದಲ್ಲಿಯೇ ಹೇಳಿದ್ದಾರೆ ನೋಡಿ, ದೇಶದ್ರೋಹಿಗಳು ಅಂದರೆ ಅಲ್ಪಸಂಖ್ಯಾತರು, ಕಮ್ಯುನಿಸ್ಟರು ಎಂದು. 1923ರಿಂದಲೇ ಫ್ಯಾಸಿಸ್ಟ್ ಮನೋಭಾವದವರ ವಿರುದ್ಧ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತಿದೆ ಎಂದು ಆರ್‌ಎಸ್‌ಎಸ್ ವಿರುದ್ಧ ಆರೋಪಿಸಿದರು. ಕಾಂಗ್ರೆಸ್ ಸೇವಾದಳಕ್ಕೆ ಆರ್‌ಎಸ್‌ಎಸ್ ಮಾದರಿ ತರಬೇತಿ ಬೇಕಿಲ್ಲ ಮಹಾತ್ಮ ಗಾಂಧಿ ಲಾಠಿ ಹಿಡಿದದ್ದು ಸಹಾಯ ಮಾಡಲು. ಆರ್‌ಎಸ್‌ಎಸ್ ಯಾಕೆ ಲಾಠಿ ಹಿಡಿಯಿತು ಅನ್ನೋದು ಜಗತ್ತಿಗೆ ಗೊತ್ತಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net