

ಬೆಂಗಳೂರು ಗ್ರಾಮಾಂತರ: ಮಾದಿಗ ಸಮುದಾಯದ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿಗಾಗಿ ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಕರ್ನಾಟಕ ಮಾದಿಗ ದಂಡೋರದ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ಎಂ.ರಾಜಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದಿಗ ದಂಡೋರ ಸಂಘಟನೆ ಮುಖಂಡರ ಸಭೆಯಲ್ಲಿ ಮಾತನಾಡಿದರು. ಎಬಿಸಿಡಿ ವರ್ಗೀಕರಣ ಮಾಡಲು ಕರ್ನಾಟಕ ಮಾದಿಗ ದಂಡೋರ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟ ಹೋರಾಟ ಮಾಡಿಕೊಂಡು ಬಂದಿದೆ,ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ಶಿಾರಸಿನಂತೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ,ಆ ತೀರ್ಪಿನ ಅನ್ವಯದಂತೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಕೊಟ್ಟಿದ್ದರೂ ಈ ಆದೇಶವನ್ನು ಯಥಾವತ್ತಾಗಿ ಜಾರಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಎಸ್‌ಸಿ- ಎಸ್‌ಟಿ ಆಯೋಗದ ಮಾಜಿ ಸದಸ್ಯ ವೆಂಕಟೇಶ್ ದೊಡ್ಡೇರಿ ಮಾತನಾಡಿ, ಒಳ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ತೀರ್ಪು ನೀಡಿದ ನಂತರವೂ ನಾಗಮೋಹನದಾಸ್ ಸಮಿತಿ ವರದಿಗೆ 2 ತಿಂಗಳು ತೆಗೆದುಕೊಂಡರು. ಈ ಸರ್ಕಾರಕ್ಕೆ ಶೋಷಿತ ಸಮುದಾಯಗಳ ಬಗ್ಗೆ ಒಲವಿಲ್ಲ ಈಗಾಗಲೇ ಹರಿಯಾಣ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದರು.