

ಉಡುಪಿ: ಸಿದ್ದರಾಮಯ್ಯ ಸರ್ಕಾರ ಗೊಂದಲದ ಗೂಡಾಗಿದೆ ಎಂಬುದಕ್ಕೆ ಅವರ ಹೇಳಿಕೆಗಳೇ ಸಾಕ್ಷಿ. ಹಿಜಾಬ್ ವಿಚಾರದಲ್ಲಿ ಹಿಂದಿನ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಹಿಜಬ್ ತರುತ್ತೇವೆ ಎನ್ನುವುದು ಕೋರ್ಟ್ ತೀರ್ಪು ಮೀರಿದ ಓಲೈಕೆ ರಾಜಕಾರಣ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟೀಕಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಚುನಾವಣೆಯ ದೃಷ್ಟಿಕೋನದಲ್ಲಿ ಹೇಳಿಕೆ ಕೊಡುತ್ತಾರೆ. ಸರ್ವರನ್ನ ಒಳಗೊಳ್ಳುವ ಆಲೋಚನೆ ರಾಜ್ಯ ಸರ್ಕಾರಕ್ಕೆ ಇಲ್ಲ. ಸಿದ್ದರಾಮಯ್ಯ ನಡವಳಿಕೆ ರಾಜಕಾರಣಕ್ಕೆ ಭೂಷಣವಲ್ಲ, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಮೂಲಕ ಬಹುಸಂಖ್ಯಾರನ್ನು ರ್ನಿಲಸುತ್ತಿದ್ದಾರೆ. ಈ ಬಗ್ಗೆ ಪರಿಷತ್ ಒಳಗೆ ಮತ್ತು ಹೊರಗೆ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು.