ಸಾಲ ವಸೂಲಾತಿ ಏಜೆನ್ಸಿಗಳು ಅನುಚಿತವಾಗಿ ವರ್ತಿಸಿದರೆ ಕ್ರಮ

udp-20-lead bank
Published on

ಉಡುಪಿ: ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಸಹಿತ ಯಾವುದೇ ಹಣಕಾಸು ಸಂಸ್ಥೆಗಳು ಸಾಲ ವಸೂಲಾತಿಗಾಗಿ ನೇಮಿಸಿಕೊಂಡಿರುವ ರಿಕವರಿ ಏಜೆಂಟ್ಗಳು ಗ್ರಾಹಕರಿಗೆ ಅನಗತ್ಯ ಕಿರುಕುಳ ನೀಡಿ ಅನುಚಿತವಾಗಿ ವರ್ತಿಸಿದರೆ ಸಂಬಂಧಪಟ್ಟ ಬ್ಯಾಂಕಗಳನ್ನೇ ಹೊಣೆಯಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್, ಉಡುಪಿ ನೋಡೆಲ್ ಅಧಿಕಾರಿ ತನು ನಂಜಪ್ಪ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ರಜತಾದ್ರಿ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ರಿಕವರಿ ಏಜೆಂಟ್‌ಗಳು ಗ್ರಾಹಕರಿಗೆ ಅಶ್ಲೀಲ ಮೆಸೇಜ್ ಕಳುಹಿಸುವುದು, ಸಾಮಾಜಿಕ ಜಾಲ ತಾಣದಲ್ಲಿ ನಿಂದನೆ ಮಾಡುವುದು ಸಲ್ಲದು. ಸಾಲ ವಸೂಲಾತಿ ಕುರಿತು ಗ್ರಾಹಕರನ್ನು ಬೆಳಗ್ಗೆ ೮ ಗಂಟೆಯಿಂದ ಸಾಯಂಕಾಲ ೭ ಗಂಟೆವರೆಗೆ ಮಾತ್ರ ಸಂಪರ್ಕಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.

೧೦ ರೂ. ನಾಣ್ಯ ಬಳಸಿ
ಕರ್ನಾಟಕದಲ್ಲಿ ೧೦ ರೂ. ನಾಣ್ಯ ಬಳಕೆ ಕಡಿಮೆಯಾಗಿದ್ದು, ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂ. ಜಮೆಯಾಗಿದೆ. ವ್ಯವಹಾರದಲ್ಲಿ ೧೦ ರೂ. ನಾಣ್ಯ ಬಳಕೆ ನಿರ್ಭಂದಿಸಿಲ್ಲ. ನಾಣ್ಯವನ್ನು ನಕಲಿ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬದೆ ದಿನನಿತ್ಯದ ವ್ಯವಹಾರದಲ್ಲಿ ನಾಣ್ಯ ಬಳಸಬೇಕು. ಕರಾವಳಿ ಭಾಗದಲ್ಲಿ ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಣ್ಯ ಬಳಕೆಗೆ ಉತ್ತೇಜನ ನೀಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಜಿಲ್ಲೆಯ ಬ್ಯಾಂಕ್‌ಗಳಿಗೆ ವಿವಿಧ ಇಲಾಖೆಗಳ ಮೂಲಕ ಸಲ್ಲಿಕೆಯಾಗುವ ಸರ್ಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿದೆ ನಿಗದಿತ ಅವಧಿಯಲ್ಲಿ ಸಾಲ ವಿತರಿಸುವಂತೆ ಸೂಚನೆ ನೀಡಿದರು.

ಕೆನರಾ ಬ್ಯಾಂಕ್ ಪ್ರಾದೇಶಿಕ ಮೆನೇಜರ್ ಲೀನಾ ಪಿಂಟೋ ಮಾತನಾಡಿ, ಜೂನ್ ತ್ರೈಮಾಸಿಕ ಅಂತ್ಯಕ್ಕೆ ಜಿಲ್ಲೆಯಲ್ಲಿ 2479 ಕೋಟಿ ಸಾಲ ವಿತರಿಸಿದ್ದು, ವಾರ್ಷಿಕ ಶೇ. 19.58 ಸಾಧನೆಯಾಗಿದೆ. ಕೃಷಿ ಕ್ಷೇತ್ರಕ್ಕೆ 589.68 ಕೋಟಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯಕ್ಕೆ 501.10 ಕೋಟಿ, ಶೈಕ್ಷಣಿಕ ವಲಯಕ್ಕೆ 12.96 ಕೋಟಿ ಹಾಗೂ ವಸತಿ ವಲಯಕ್ಕೆ 93.55 ಕೋಟಿ ಸಾಲ ವಿತರಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಶೇ. 48.86 ಆಗಿದೆ. ಇದನ್ನು ಶೇ. 50ಕ್ಕೆ ಏರಿಕೆ ಮಾಡಬೇಕು ಎಂದರು.

ಲೀಡ್ ಬ್ಯಾಂಕ್ ಮೆನೇಜರ್ ಪಿ.ಎಂ. ಪಿಂಜಾರ ಮಾತನಾಡಿ, ೨ ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ಸಾಲಗಳನ್ನು ಬ್ಯಾಂಕ್ ಶಾಖೆ ಹಂತದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲ. ಬ್ಯಾಂಕ್ ಪ್ರಾದೇಶಿಕ ಮೆನೇಜರ್ ಮಾತ್ರ ತಿರಸ್ಕರಿಸಬಹುದು. ಸ್ವದ್ಯೋಗಗಳಿಗೆ ಮುದ್ರಾ ಯೋಜನೆಯಲ್ಲಿ ೧೦ ಲಕ್ಷ ವರೆಗೆ ಸಾಲ ನೀಡಬಹುದು. ಸ್ಥಳೀಯವಾಗಿ ವಾಸಿಸುತ್ತಿಲ್ಲ. ಫೋನ್ ತೆಗೆಯುತ್ತಿಲ್ಲ ಮುಂತಾದ ಸಣ್ಣ ಕಾರಣಗಳಿಗೆ ಸರ್ಕಾರಿ ಯೋಜನೆ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸಿದರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವರದಿ ನೀಡಲಾಗುವುದು ಎಂದರು. ನಬಾರ್ಡ್ ಬ್ಯಾಂಕ್‌ನ ಪ್ರಾದೇಶಿಕ ಉಪ ಪ್ರಬಂಧಕಿ ಸಂಗೀತಾ ಕಾರ್ಥಾ, ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮೆನೇಜರ್ ಡಾ.ವಾಸಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net