ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳು ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ

DSC_8415
Published on

ಗದಗ: ಬ್ಯಾಂಕ್ ಅಧಿಕಾರಿ ಸಿಬ್ಬಂದಿಗಳು ರೈತರು ಹಾಗೂ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂಧಿಸುವಂತೆ ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಲೀಡ್ ಬ್ಯಾಂಕ್ ಪದಾಧಿಕಾರಿಗಳು, ಹೆಸ್ಕಾಂ, ಕೃಷಿ ಇಲಾಖೆ ಹಾಗೂ ರೈತ ಮುಖಂಡರುಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆ ಕೊರತೆಯಿಂದಾಗಿ ರೈತರ ಪರಿಸ್ಥಿತಿಯು ಗಂಭೀರವಾಗಿದೆ. ಸರ್ಕಾರದಿಂದ ಫಲಾನುಭವಿಗಳ ಖಾತೆಗಳಿಗೆ ಬೆಳೆ ವಿಮೆ, ವೃದ್ಯಾಪ ವೇತನ, ಅನ್ನಭಾಗ್ಯ, ನರೇಗಾ ಕೂಲಿ ಮೊತ್ತವನ್ನು ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಈ ಮೊತ್ತವನ್ನು ಯಾವುದೇ ಕಾರಣಕ್ಕೂ ಅವರ  ಸಾಲದ ಕಂತುಗಳಿಗಾಗಿ ಕಠಾವಣೆ ಹಾಗೂ ಖಾತೆಗಳನ್ನು ಸ್ಥಗಿತಗೊಳಿಸದಂತೆ ಸೂಚನೇ ನೀಡಿದರು. ಗ್ರಾಮೀಣ ಭಾಗದ ಕೆಲವೊಂದು ಬ್ಯಾಂಕ್ ಶಾಖೆಗಳಲ್ಲಿನ ಅಧಿಕಾರಿ ಸಿಬ್ಬಂದಿಗಳು ರೈತರೊಂದಿಗೆ ಸೌಜನ್ಯದಿಂದ ವರ್ತಿಸದೇ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ದೂರುಗಳಿದ್ದು ಈ ಕುರಿತು ಜಿಲ್ಲೆಯ ಎಲ್ಲ ಬ್ಯಾಂಕ್ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದರು. ಲೀಡ ಬ್ಯಾಂಕ ಮ್ಯಾನೇಜರ ಅವರು ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಲು ಸೂಚನೆ ನೀಡಲಾಗಿದೆ. ಇಂತಹ ಸಮಸ್ಯೆಗಳನ್ನು ಸಮಾಧಾನವಾಗಿ ಪರಿಹರಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚನೇ ನೀಡಿದರು.

ಲಕ್ಷ್ಮೇಶ್ವರ ಭಾಗದ ರೈತರ ಪಂಪಸೆಟಗಳಿಗೆ ಸಮರ್ಪಕ ವಿಧ್ಯುತ ಪೂರೈಕೆಯಲ್ಲಿ ಅಡಚಣೆಯಾಗುತ್ತಿದೆ ಎಂಬ ದೂರುಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು. ರೈತರ ಹಿತದೃಷ್ಟಿಯಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ವಿಧ್ಯುತ್ ಪೂರೈಸಲು ತಿಳಿಸಿದರು. ರೈತರ ಅಭಿಪ್ರಾಯಗಳನ್ನು ಅರಿತು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಲಕ್ಷ್ಮೇಶ್ವರ ಭಾಗದ ರೈತರಿಗೆ ಪಾಳೆ ಪ್ರಕಾರ ಹಗಲು ಹಾಗೂ ರಾತ್ರಿ ವಿಧ್ಯುತ್ ಪೂರೈಸಬೇಕು. ಈ ಕುರಿತು ನಿಯಮಿತವಾಗಿ ಪತ್ರಿಕಾ ಪ್ರಕಟಣೆಯನ್ನು ನೀಡಲು ಸೂಚನೆ ನೀಡಿದರು.

ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಅಗತ್ಯದ ಮೇವಿನ ದಾಸ್ತಾನಿನ ಮಾಹಿತಿ ಪಡೆದ ಸಚಿವರು ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಮೇವನ್ನು ಬೆಳೆಸಲು ಹಾಗೂ ಜಿಲ್ಲೆಗೆ ಬೇಕಾಗಬಹುದಾದ ಮೇವಿನ ಅಗತ್ಯತೆಗೆ ಅನುಗುಣವಾಗಿ ಮೇವನ್ನು ಬೆಳೆಸಲು ಕ್ರಮಕೈಗೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರಿಗೆ ತಿಳಿಸಿದರು.

ಲೀಡ ಬ್ಯಾಂಕ ಮ್ಯಾನೇಜರ ಮಾತನಾಡಿ ಸಾಮಾಜಿಕ ಭದ್ರತೆ ಯೋಜನೆಯಡಿಯ ಹಣವನ್ನು ಸಾಲ ಹೊಂದಾಣಿಕೆ ಮೊತ್ತಕ್ಕೆ ಕಡಿತ ಮಾಡದಂತೇ ಎಲ್ಲ ಬ್ಯಾಂಕಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೇ ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.

ಹೆಸ್ಕಾಂ ಕಾರ್ಯಪಾಲಕ ಅಭಿಯಂತರ ಕಲ್ಯಾಣಶೆಟ್ಟರ ಮಾತನಾಡಿ ಬಾಗೇವಾಡಿ, ಬೆಳ್ಳಟ್ಟಿ ವಿಧ್ಯುತ್ ಸರಬರಾಜು ಕೇಂದ್ರಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಮುಂದಿನ ಹದಿನೈದು ದಿನಗಳೊಳಗಾಗಿ ಬಾಗೇವಾಡಿ ಬೆಳ್ಳಟ್ಟಿ ವಿಧ್ಯುತ್ ಸರಬರಾಜು ಕೇಂದ್ರಗಳಿಂದ ವಿಧ್ಯುತ್ ಸರಬರಾಜು ಸರಾಗವಾಗಿ ಮಾಡಲಾಗುವದು. ಸಧ್ಯ ಮುಂಡರಗಿ ಹಾಗೂ ಲಕ್ಷ್ಮೇಶ್ವರ ವಿಭಾಗಗಳಲ್ಲಿ ನಿಯಮಿತವಾಗಿ ವಿಧ್ಯುತ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೈತ ಮುಖಂಡರುಗಳು ಮಾತನಾಡಿ ಲಕ್ಷ್ಮೇಶ್ವರ ವಿಭಾಗದ ಹೆಸ್ಕಾಂ ವತಿಯಿಂದ ಪಂಪ ಸೆಟಗಳಿಗೆ ನಿರಂತರ ವಿಧ್ಯುತ್ ಪೂರೈಕೆ, ಮಧ್ಯರಾತ್ರಿ ಎರಡು ಗಂಟೆಗೆ ವಿಧ್ಯುತ ನೀಡುತ್ತಿದ್ದು ಈ ಸಂದರ್ಭದಲ್ಕಿ ವಿಧ್ಯುತ ವ್ಯತ್ಯವಯ ಮೇಲಿಂದ ಮೇಲೆ ಆಗುತ್ತಿದೆ. ಆದ್ದರಿಂದ ಹಗಲು ಹೊತ್ತಿನಲ್ಲಿ ವಿಧ್ಯುತ ಪೂರೈಸುವ ಕುರಿತು, ಹೆಸ್ಕಾಂ ಸಹಾಯವಾಣಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಗ್ರಾಹಕರ ಸಭೆ ನಿಯಮಿತವಾಗಿ ಜರಗುತ್ತಿಲ್ಲ ಎಂದು ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ರೈತರಿಗೆ ಬರಬೇಕಾದ ಬೆಳೆ ವಿಮೆ, ವೃದ್ಯಾಪ ವೇತನ, ಅನ್ನಭಾಗ್ಯ, ನರೇಗಾ ಕೂಲಿಗಳನ್ನು ಸಾಲದ ಕಂತುಗಳಿಗಾಗಿ ತಡೆ ಹಿಡಿಯಲಾಗುತ್ತಿದೆ. ಅಲ್ಲದೇ ಬ್ಯಾಂಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರೈತರಿಗೆ ಸರಿಯಾಗಿ ಸ್ಪಂಧನೆ ನೀಡುತ್ತಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ ನಾಯ್ಕ, ಜಂಟಿ ಕೃಷಿ ನಿರ್ದೇಶಕಿ, ತಾರಾಮಣಿ, ವಿವಿಧ ಬ್ಯಾಂಕುಗಳ ಅಧಿಕಾರಿಗಳು ಸೇರಿದಂತೆ ರೈತ ಮುಖಂಡರು ಹಾಗೂ ಪ್ರತಿನಿಧಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net