ಕೊನೇಭಾಗದ ರೈತರ ಸಮಸ್ಯೆ ಉಲ್ಬಣ

Untitled design (1)
ದೇವದುರ್ಗ ತಾಲೂಕಿನ ಗಣೇಕಲ್ ಜಲಾಶಯದ ಹತ್ತಿರವಿರುವ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರಿನ ಹರಿವು ನಿಂತಿರುವುದು.
Published on

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಕೊನೇ ಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲಿಟ್ಟಿದ್ದ ಭರವಸೆ ಹುಸಿಯಾಗಿದ್ದು, ಮೈಲ್ 104ರ ಕೊನೆಯ ಭಾಗಕ್ಕೆ ಹರಿಸಲಾಗುತ್ತಿದ್ದ ನೀರು ನಿಲುಗಡೆಯಾಗಿದೆ.

ಹೋರಾಟಕ್ಕೆ ಸಜ್ಜಾದ ರೈತರು

ರೈತರು ಕೆಲವು ದಿನಗಳಿಂದ ಹೆದ್ದಾರಿಯಲ್ಲಿ ಸಂಚಾರ ತಡೆ ಸೇರಿದಂತೆ ನಿರಂತರ ಪ್ರತಿಭಟನೆ ನಡೆಸಿದ ನಂತರ ಮೈಲ್ 104ರಲ್ಲಿ 6.5 ಅಡಿ ಗೇಜ್ ಕಾಪಾಡುವುದರ ಜತೆಗೆ ಗಣೇಕಲ್ ಜಲಾಶಯಕ್ಕೆ ನೀರು ಹರಿಸಿ 10.50 ಅಡಿ ನೀರು ಸಂಗ್ರಹ ಮಾಡಲಾಗಿತ್ತು. ಈಗ ಶುಕ್ರವಾರದಿಂದ ಜಲಾಶಯಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.

ಗಣೇಕಲ್ ಜಲಾಶಯ 15 ಅಡಿ ತುಂಬಿದ ನಂತರ ಕೊನೇಭಾಗಕ್ಕೆ ನೀರು ಹರಿಯುವ ಆಶಾಭಾವದಲ್ಲಿದ್ದ ರೈತರು, ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದರಿಂದ ಪುನಃ ಹೋರಾಟ ನಡೆಸಲು ಸಿದ್ಧರಾಗಿದ್ದಾರೆ. ಸಂಚಾರ ತಡೆ ಸೇರಿದಂತೆ ಹೋರಾಟವನ್ನು ತೀವ್ರಗೊಳಿಸಲ ಮುಂದಾಗಿದ್ದಾರೆ. ವಾರಗಳ ಕಾಲ ಮೈಲ್ 104ರಲ್ಲಿ ನಿಗದಿತ ಗೇಜ್ ಕಾಪಾಡುವುದರ ಜತೆಗೆ ಗಣೇಕಲ್ ಜಲಾಶಯಕ್ಕೆ ನೀರು ತುಂಬಿಸಲಾಗುತ್ತಿದ್ದರಿಂದ ರಾಯಚೂರು ಬಂದ್ ಮಾಡುವ ನಿರ್ಧಾರವನ್ನು ಮುಂದೂಡಿ ನೀರು ಹರಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ರೈತರು ಅಭಿನಂದನೆ ತಿಳಿಸಿದ್ದರು. ಈಗ ಪರಿಸ್ಥಿತಿ ಭಿನ್ನವಾಗಿದ್ದು, ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಮೈಲ್ 104ರಲ್ಲಿ ನೀರಿನ ಹರಿಯುವ ಗೇಜ್ ಕಡಿಮೆಯಾಗುತ್ತಾ ಬಂದಿತ್ತು. ರೈತರು ಗೇಜ್ ಕಡಿಮೆಯಾದರೂ ನೀರಿನ ಹರಿವು ಮುಂದುವರಿದಿದ್ದರಿಂದ ಸಮಾಧಾನದಿಂದ ಇದ್ದರು. ಆದರೆ ಶುಕ್ರವಾರದಿಂದ ಮೈಲ್ 104ರಲ್ಲಿ ನೀರಿನ ಹರಿವು ಇಲ್ಲದಂತಾಗಿದ್ದರಿಂದ ರೈತರ ಆಕ್ರೋಶ ಕಾರಣವಾಗಿದೆ.

ಸಾಥ್‌ಮೈಲ್ ಕ್ರಾಸ್ ಬಳಿ ಶನಿವಾರ ಸಭೆ ಸೇರಿ ಪುನಃ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದು, ಜತೆಗೆ ರಾಜ್ಯೋತ್ಸವ ದಿನದಂದು ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸ್ತುತ ದಾಖಲೆಗಳಲ್ಲಿ ಮೈಲ್ 104ರಲ್ಲಿ 1.80 ಗೇಜ್ ಕಾಪಾಡಲಾಗುತ್ತಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗುತ್ತಿದ್ದರೂ ಕಾಲುವೆಯಲ್ಲಿ ಮುಂದೆ ನೀರು ಹರಿಯುತ್ತಿಲ್ಲ. ಹೀಗಾಗಿ ರೈತರು ಬೆಳೆಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net