

ಹಟ್ಟಿಚಿನ್ನದಗಣಿ: ಹಟ್ಟಿ ಪಟ್ಟಣ ಪಂಚಾಯಿತಿಯಾಗಿ 10 ವರ್ಷ ಕಳೆದಿದೆ. 171 ಬಡಾವಣೆಗಳಿಗೆ ರಾಯಚೂರಿನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅನುಮೋದನೆ ನೀಡಿದೆ. ಆದರೆ, ಅಧಿಕಾರಿಗಳು ಹಾಗೂ ಲೇಔಟ್ ಮಾಲೀಕರ ನಿರ್ಲಕ್ಷೃ ಧೋರಣೆಯಿಂದ ಮೂಲ ಸೌಕರ್ಯವಿಲ್ಲದೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಹಟ್ಟಿ ಪಟ್ಟಣಕ್ಕೆ ಸಮರ್ಪಕ ಸೌಲಭ್ಯಗಳಿಲ್ಲ. 171 ಬಡಾವಣೆಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಇತ್ಯಾದಿ ಸೌಲಭ್ಯಗಳು ಮರೀಚಿಕೆಯಾಗಿವೆ. ಅದರಲ್ಲೂ ಹೊಸ ಬಡಾವಣೆಗಳ ಸ್ಥಿತಿ ತೀರಾ ಶೋಚನೀಯವಾಗಿದೆ.
ಸರ್ಕಾರದ ಆದೇಶ ಪ್ರಕಾರ ಒಂದು ಬಡಾವಣೆಯಲ್ಲಿ ಶೇ.55 ವಾಸಕ್ಕಾಗಿ, ಶೇ.35 ರಸ್ತೆಗಾಗಿ ಮತ್ತು ಶೇ.10 ಜಾಗ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡಬೇಕು. ಇದರಿಂದ ಸರ್ಕಾರಕ್ಕೆ ಸಾಕಷ್ಟು ತೆರಿಗೆ ಬರುತ್ತದೆ. ಆದರೆ, ಪಪಂ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಅಧಿಕಾರಿಗಳ ನಿರ್ಲಕ್ಷೃದಿಂದ ನಿವೇಶನ,
ವಾಣಿಜ್ಯ ಉದ್ದೇಶ ಮತ್ತು ಬಹು ಮಾಲೀಕತ್ವದ ಕಟ್ಟಡ ಮಾಲೀಕರಿಂದ ಯಾವುದೇ ತೆರಿಗೆ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳಿಗೆ ಹಣ ಮುಟ್ಟಿದರೆ ಇಲ್ಲಿ ಖಾತಾ ವಿತರಣೆಯಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೇ ಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 13 ವಾರ್ಡ್ ಪೈಕಿ ಶೇ.80ಕ್ಕೂ ಹೆಚ್ಚು ಬಡಾವಣೆಗಳಿಗೆ ರಸ್ತೆ, ಚರಂಡಿ, ಬೀದಿದೀಪ ಸೌಲಭ್ಯ ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ಕೆಸರು ಗದ್ದೆಗಳಾಗಿ ಬದಲಾಗುತ್ತವೆ. ನಿತ್ಯ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃದ್ಧರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಚ್ಚಾ ರಸ್ತೆಯಲ್ಲಿ ವಾಹನ ಓಡಿಸಲಾಗದೆ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಕೆಲ ಏರಿಯಾಗಳಲ್ಲಿ ನಿವೇಶನ ನಿರ್ವಹಣೆ ಕಾಣದೆ ಜಾಲಿಗಿಡಗಳು ಬೆಳೆದಿದ್ದು, ತೊಟ್ಟಿಗಳಾಗಿ ಮಾರ್ಪಟ್ಟಿವೆ. ಬೀದಿ ದೀಪಗಳಿಲ್ಲದೆ ರಾತ್ರಿ ಹೊತ್ತು ಮನೆಯಿಂದ ಹೊರಬರಲು ಹೆದರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುವ ನಿವಾಸಿಗಳು, ಇನ್ನಾದರೂ ಅಭಿವೃದ್ಧಿಗೊಳ್ಳದ ಬಡಾವಣೆ ಮಾಲೀಕರಿಗೆ ನೋಟಿಸ್ ನೀಡಬೇಕು ಅಥವಾ ನಗರ ಮತ್ತು ಗ್ರಾಮಾಂತರ ಯೋಜನಾಧಿಕಾರಿಗಳು ಬಡಾವಣೆಯ ಅನುಮತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಹಟ್ಟಿಚಿನ್ನದಗಣಿಯಲ್ಲಿ ಅಭಿವೃದ್ಧಿ ಕಾಣದ ಬಡಾವಣೆಗಳಿಗೆ ಪಪಂ ಅಧಿಕಾರಿಗಳೇ ನೇರಹೊಣೆೆ. ಯಾಕೆಂದರೆ ಸರ್ಕಾರಕ್ಕೆ ತೆರಿಗೆ ಹೋಗುವ ಮುನ್ನ ಅಧಿಕಾರಿಗಳಿಗೆ ಹಣ ಮುಟ್ಟಿದರೆ ಸಾಕು. ಬಡಾವಣೆಗಳು ಯಾವ ಸ್ಥಿತಿಯಲ್ಲಿದ್ದರೂ ಅವರಿಗೆ ಬೇಡ. ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡಲಾದ ಸ್ಥಳಗಳಿಗೆ ತಂತಿಬೇಲಿ ಹಾಕುವ ಮೂಲಕ ಒತ್ತುವರಿ ಆಗದಂತೆ ತಡೆಯಬೇಕು. ಬಸವರಾಜ ಖಜನೆಕರ್ ನಿವಾಸಿ ಹಟ್ಟಿ ಪಟ್ಟಣದಲ್ಲಿ ಒಟ್ಟು 171 ಬಡಾವಣೆಗಳಿವೆ. ಅದರಲ್ಲಿ ಶೇ.40 ಬಡಾವಣೆಯ ಮಾಲೀಕರಿಗೆ ಖಾತೆ ವಿತರಿಸಲಾಗಿದೆ. ಕಡ್ಡಾಯವಾಗಿ ವಿದ್ಯುತ್ ಸಂಪರ್ಕ, ಚರಂಡಿ, ರಸ್ತೆಗಳನ್ನು ನಿರ್ಮಾಣ ಮಾಡಿದ ನಂತರವೇ ಖಾತೆ ವಿತರಿಸಲಾಗುತ್ತದೆ. ಕೆಲವೆಡೆ ಲೇಔಟ್ ಮಾಲೀಕರು ಅಭಿವೃದ್ಧಿ ಮಾಡುತ್ತಿಲ್ಲ. ಸೂಚನೆ ನೀಡಿದರೂ ಪಾಲನೆ ಮಾಡುತ್ತಿಲ್ಲ. ಜಗನ್ನಾಥ ಜೋಶಿ ಮುಖ್ಯಾಧಿಕಾರಿ, ಹಟ್ಟಿ ಪಪಂ