ತ್ಯಾಗಭರಿತ ಸಮರ್ಪಿತ ಜೀವನವೇ ರಾಷ್ಟ್ರದ ರಕ್ಷಣೆಗೆ ಅಡಿಪಾಯ

Oplus_0
ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆಯನ್ನು ಮಾಡಿ ನಮನ ಸಲ್ಲಿಸಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಅವರು ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಇದರ ಸದಸ್ಯರ ಉಘೇ ವೀರಭೂಮಿಗೆ ಎಂಬ ರ‌್ಯಾಲಿಗೆ ಚಾಲನೆ ನೀಡಿದರು.
Published on

ಮಂಗಳೂರು: ತ್ಯಾಗಭರಿತ ಸಮರ್ಪಿತ ಜೀವನವೇ ರಾಷ್ಟ್ರದ ರಕ್ಷಣೆಗೆ ಅಡಿಪಾಯವಾಗಿದ್ದು, ಭೋಗವನ್ನು ಮರೆತು ತ್ಯಾಗವನ್ನು ಮೆರೆದ ಜೀವನವನ್ನು ನಡೆಸಿದಾಗ ಮಾತ್ರ ಸುಸಂಸ್ಕೃತವಾದ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯ ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪ್ರವೀಣ್ ಮಾರ್ಟಿಸ್ ಹೇಳಿದರು.

ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ವತಿಯಿಂದ 2008ರ ಮುಂಬೈ ಭಯೋತ್ಪಾದನಾ ದಾಳಿ ನಡೆದಾಗ ಭಯೋತ್ಪಾದಕರನ್ನು ಮಟ್ಟಹಾಕಿ ದೇಶವನ್ನು ರಕ್ಷಿಸುವ ಮಹತ್ಕಾರ್ಯದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಆಯೋಜಿಸಲ್ಪಟ್ಟ 16ನೇ ವರ್ಷದ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮಾಜಿ ಸೈನಿಕನ ಮಗನಾದ ತನಗೆ ಸೈನಿಕನಾಗಬೇಕೆಂಬ ಆಸೆ ಇದ್ದರೂ ಅದು ಸಾಧ್ಯವಾಗದೇ ಇದ್ದಾಗ ಸೈನಿಕರನ್ನು ಹಾಗೂ ದೇಶ ರಕ್ಷಣೆಗೆ ಸಿದ್ಧರಾಗುವ ಯುವ ಜನರನ್ನು ನಿರ್ಮಾಣ ಮಾಡುವ ಶಿಕ್ಷಣ ಕ್ಷೇತ್ರದಲ್ಲಿ ಸೈನಿಕನಾಗಿ ದುಡಿಯುವ ಸೌಭಾಗ್ಯ ದೊರಕಿದೆ. ಇದು ನನ್ನ ಪಾಲಿನ ಪುಣ್ಯ ಎಂದು ಭಾವಿಸುತ್ತೇನೆ. ಭಾರತೀಯ ವಾಯುಸೇನೆಯಲ್ಲಿ ಅಧಿಕಾರಿಯಾಗಿರುವ ತನ್ನ ಸಹೋದರನನ್ನು ನೆನಪಿಸಿದ ಅವರು ಸೈನಿಕರ ಕುಟುಂಬವೆಂದರೆ ಅದು ಅತ್ಯಂತ ಗೌರವಯುತ ಹಾಗೂ ಶಿಸ್ತಿನ ಕುಟುಂಬವಾಗಿ ಸಮಾಜ ಗುರುತಿಸುತ್ತದೆ ಎಂದರು.

ಭಾರತೀಯ ನೌಕಾದಳದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್, 18ನೇ ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಇದರ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಗ್ರೇಷಿಯನ್ ಸಿಕ್ವೇರಾ ನುಡಿನಮನ ಸಲ್ಲಿಸಿದರು.

ಎಂ.ಐ.ಟಿ.ಯ ಸಹ ಪ್ರಾಧ್ಯಾಪಕ ವಾದಿರಾಜ್ ಗೋಪಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶೇಶಪ್ಪ ಕೆ., ಕೆ.ಸಿ.ಸಿ.ಐ. ಅಧ್ಯಕ್ಷ ಆನಂದ್ ಜಿ.ಪೈ, ವೈದ್ಯ ಯುರೊಲಾಜಿಸ್ಟ್ ಡಾ. ನಿಶ್ಚಿತ್ ಡಿಸೋಜ, ವಕೀಲೆ ಬಿ. ನಯನ ಪೈ, ವಿದುಷಿ ಸೌಮ್ಯ ಸುಧೀಂದ್ರ ರಾವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವಿವಿಧ ಕಾಲೇಜುಗಳ ಎನ್.ಸಿ.ಸಿ. ಕೆಡೆಟ್‌ಗಳು, ಎನ್.ಎಸ್.ಎಸ್. ಸ್ವಯಂಸೇವಕರು, ಕ್ರೀಡಾಪಟುಗಳು ಹುತಾತ್ಮರಿಗೆ ಪುಷ್ಪ ನಮನವನ್ನು ಸಲ್ಲಿಸಿದರು.

ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆಯ ಸ್ಥಾಪಕ ಫ್ರ್ಯಾಂಕ್ಲಿನ್ ಮೊಂತೆರೊ ಸ್ವಾಗತಿಸಿದರು. ಮೇವಿಸ್ ರಾಡ್ರಿಗಸ್ ಕದ್ರಿ ಮಲ್ಲಿಕಟ್ಟೆ ವಂದಿಸಿದರು. ಅರುಣ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮೊದಲು ಹುತಾತ್ಮ ಸ್ಮಾರಕಕ್ಕೆ ಪುಷ್ಪಾರ್ಚನೆಯನ್ನು ಮಾಡಿ ನಮನ ಸಲ್ಲಿಸಿ ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಇದರ ಸದಸ್ಯರಿಂದ ಉಘೇ ವೀರಭೂಮಿಗೆ ಎಂಬ ರ‌್ಯಾಲಿಗೆ ಚಾಲನೆಯನ್ನು ನೀಡಲಾಯಿತು.

--------------

ಹಿಂದು ಕ್ರೈಸ್ತ ಮುಸಲ್ಮಾನ ಎಂಬ ಭೇದವಿಲ್ಲದೆ, ಮಂದಿರ, ಮಸೀದಿ, ಚರ್ಚ್ ಎಂಬ ಅಂತರವಿಲ್ಲದೆ ಸಮಾಜದ ಎಲ್ಲಾ ಸಮುದಾಯ ಜಾತಿಬಂಧುಗಳನ್ನು ಒಂದುಗೂಡಿಸಿ ಹುತಾತ್ಮರಿಗಾಗಿ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನ ಸಲ್ಲಿಸುತ್ತಿರುವುದು ಇಡೀ ದೇಶಕ್ಕೆ ಒಂದು ಮಾದರಿ ಕಾರ್ಯಕ್ರಮ. ಈ ಕಾರ್ಯಕ್ರಮ ಒಂದು ರಾಷ್ಟ್ರ-ಒಂದು ಕುಟುಂಬ ಎಂಬ ಪರಿಕಲ್ಪನೆಯ ಭಾಗ.

- ಡಾ.ವಾದಿರಾಜ್ ಗೋಪಾಡಿ,

ಎಂ.ಐ.ಟಿ.ಯ ಸಹ ಪ್ರಾಧ್ಯಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net