

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಅವಳಿನಗರ ಸೇರಿ ಜಿಲ್ಲೆಯ ಚಹರೆ ಬದಲಾಗಲಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಬಂದಿದ್ದಾರೆ. ಆದರೆ, ಅವಳಿನಗರದ ಕಾಂಕ್ರಿಟ್ ರಸ್ತೆಗಳು ಈಗ ತಮ್ಮ ನಿಜ ಬಣ್ಣ ತೋರಿಸುತ್ತಿವೆ. ಕೆಲ ರಸ್ತೆಗಳ ಮೇಲಿನ ಪದರು ಹಾರಿಹೋಗಿದ್ದು, ಕಾಮಗಾರಿಯ ಗುಣಮಟ್ಟ ಏನೆಂಬುದನ್ನು ತೋರಿಸುತ್ತಿವೆ.
ಅವಳಿನಗರದಲ್ಲಿ ಅನೇಕ ರಸ್ತೆಗಳು ಕಾಂಕ್ರೀಟ್ ಆಗಿವೆ, ಇನ್ನೂ ಕೆಲವೆಡೆ ಆಗುತ್ತಿವೆ. ಹಿಂದಿನ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹಲವು ರಸ್ತೆಗಳ ಸುಧಾರಣೆಗೆ ಮುತುವರ್ಜಿ ವಹಿಸಿ ಅನುದಾನ ಮಂಜೂರು ಮಾಡಿದೆ. ಟೆಂಡರ್ ಮೂಲಕ ಕಾಮಗಾರಿಯ ಕಾರ್ಯಾದೇಶ ಕೂಡ ನೀಡಿತ್ತು.
ಇದೀಗ ಒಂದೊಂದೇ ರಸ್ತೆಗಳ ಕಾಮಗಾರಿ ಮುಗಿದು ಜನ ಸಂಚಾರಕ್ಕೆ ಮುಕ್ತಗೊಳ್ಳುತ್ತಿವೆ. ಆದರೆ, ಇನ್ನೊಂದೆಡೆ ಅವುಗಳ ಗುಣಮಟ್ಟವನ್ನು ಜನರು ಪ್ರಶ್ನಿಸುವಂತಾಗಿದೆ. ರಸ್ತೆ ಅಭಿವೃದ್ಧಿ ಮಾಡಿ ವರ್ಷಗಳು ಕಳೆದಿಲ್ಲ. ಆಗಲೇ ಅವುಗಳ ಮೇಲೆ ಸಂಚಾರ ಸಂಚಕಾರ ತಂದೊಡ್ಡುತ್ತಿದೆ.
ವಿದ್ಯಾನಗರದ ತಿಮ್ಮಸಾಗರ ಗುಡಿ ಓಣಿ (ಹೊಸ ಕೋರ್ಟ್ ಮುಂದಿನಿಂದ ಹೊಸೂರು ಕಡೆ ಬರುವ ದಾರಿ) ರಸ್ತೆಯು ಕಾಂಕ್ರೀಟ್ ಮಾಡಿದ ಕೆಲವೇ ದಿನಗಳಿಗೆ ಮೇಲಿನ ಪದರು ಕಿತ್ತು ಹೋಗಿದೆ. ರಸ್ತೆಯಲ್ಲಿ ಜಲ್ಲಿ ಕಲ್ಲು ಕಾಣಿಸುತ್ತಿವೆ. ಈ ರೀತಿ ಜಲ್ಲಿಕಲ್ಲು ಮೇಲೆದ್ದ ರಸ್ತೆಯಲ್ಲಿ ಸಂಚರಿಸುವುದರಿಂದ ವಾಹನಗಳ ಟೈರ್ ಹಾಳಾಗುತ್ತವೆ. ಜನರ ಓಡಾಟಕ್ಕೂ ಸಮಸ್ಯೆ. ಇದೇ ಸ್ಥಿತಿ ಹಲವು ಕಡೆಗಳಲ್ಲಿ ಕಂಡು ಬರುತ್ತದೆ. ಇದಲ್ಲದೇ ಈ ದಾರಿಯಲ್ಲಿ ಮಳೆ ನೀರು ಸಂಪೂರ್ಣ ರಸ್ತೆ ಮೇಲೆ ಹರಿಯುತ್ತದೆ. ಪಕ್ಕದಲ್ಲಿ ಹರಿದು ಹೋಗಲು ಸರಿಯಾದ ಮಾರ್ಗ ಇಲ್ಲ. ಇರುವ ಗಟಾರುಗಳು ಕಸ ತುಂಬಿಕೊಂಡಿವೆ. ಹಾಗಾಗಿ ನೀರು ರಸ್ತೆ ಮೇಲೆ ನಿಲ್ಲುತ್ತಿದೆ.
ಪರಿಶೀಲನೆ ಮಾಡಲಿಲ್ಲವೇ?: ರಸ್ತೆ ಅಭಿವೃದ್ಧಿಯಾಗಬೇಕಾದರೆ ಮೊದಲು ಟೆಂಡರ್ ಪ್ರಕ್ರಿಯೆ, ಕಾರ್ಯಾದೇಶ, ಕಾಮಗಾರಿ ನಂತರ ಪರಿಶೀಲನೆ ಹೀಗೆ ವಿವಿಧ ಆಯಾಮಗಳು ಸಾಗಬೇಕು. ಆದರೆ, ಇಲ್ಲಿ ರಸ್ತೆ ಮಾಡಿದ ನಂತರ ಅಧಿಕಾರಿಗಳು ಅದರ ಗುಣಮಟ್ಟವನ್ನು ಪರಿಶೀಲನೆ ಮಾಡುತ್ತಿಲ್ಲವೇ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಸ್ಕಿಡ್ ಆಗುವ ಭಯ: ಕಾಂಕ್ರಿಟ್ ಮಾಡಿದ ಸ್ಥಳದಲ್ಲಿ ರಸ್ತೆಗಳ ಅಂಚಿಗೆ ಸರಿಯಾದ ಇಳಿಜಾರು ಮಾಡದಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಲವು ಕಡೆಗಳಲ್ಲಿ ಬೈಕ್, ಸೈಕಲ್‌ಗಳು ಸ್ಕಿಡ್ ಆಗುವ ಆತಂಕ ಎದುರಾಗಿದೆ. ಕಾಂಕ್ರಿಟ್ ರಸ್ತೆ ಪಕ್ಕದಲ್ಲಿ ಪೇವರ್ಸ್ ಅಳವಡಿಸುವಾಗ ಎರಡನ್ನೂ ಸಮನಾಗಿ ಇರುವಂತೆ ನೋಡಿಕೊಳ್ಳಬೇಕು. ಆದರೆ, ಕೆಲವೆಡೆ ಹೆಚ್ಚು, ಕಡಿಮೆಯಾಗಿ ಸಮಸ್ಯೆ ಉಂಟಾಗುತ್ತಿದೆ. ಬೈಕ್ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ.