

ಚಿತ್ರದುರ್ಗ: ದೇವಿ ಆರಾಧನೆಯ ತವರೂರು ಚಿತ್ರದುರ್ಗ ಜಿಲ್ಲೆಯಲ್ಲಿ ಶರನವರಾತ್ರಿಯನ್ನು ಹಿಂದಿನ ಬಾರಿಗಿಂತಲೂ ವಿಶೇಷವಾಗಿ ಆಚರಿಸಲು ಈ ಬಾರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೆ. 26ರಿಂದ ಆರಂಭವಾಗುವ ಮಹೋತ್ಸವಕ್ಕೆ ಈಗಾಗಲೇ ಶಕ್ತಿದೇವತೆಗಳ ದೇಗುಲಗಳು ಸಜ್ಜಾಗಿವೆ.
ಜಿಲ್ಲೆಯ ಹಲವೆಡೆ ನೂರಾರು ಶಕ್ತಿದೇವತೆಗಳು ನೆಲೆಯೂರಿದ್ದು, ಅಸಂಖ್ಯಾತ ಭಕ್ತಗಣ ಶ್ರದ್ಧಾಭಕ್ತಿಯಿಂದ ಆಚರಿಸಲು ಉತ್ಸುಕರಾಗಿದ್ದಾರೆ. ದೇಗುಲ, ಮನೆಗಳ ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನಿತ್ಯವೂ ನವೋಲ್ಲಾಸಕ್ಕೆ ಉತ್ಸವ ಸಾಕ್ಷಿಯಾಗಲಿದೆ.
ಕೋಟೆನಗರಿಯ ರಕ್ಷಕ ದೇವತೆಗಳೆಂದೇ ಕರೆಯಲ್ಪಡುವ ನವದುರ್ಗಿಯರು ಸೇರಿ ಇಲ್ಲಿನ ಎಲ್ಲಾ ಶಕ್ತಿದೇವತೆಗಳಿಗೂ ನವರಾತ್ರಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿದೆ. ಕರೊನಾ ಕಾರಣಕ್ಕೆ ಎರಡು ವರ್ಷ ಕಳೆಗುಂದಿದ್ದ ಉತ್ಸವ ಪುನಃ ಕಳೆಗಟ್ಟಿದೆ.
ನವರಾತ್ರಿ ಸಂದರ್ಭದಲ್ಲಿ ಒಂಬತ್ತು ರಾತ್ರಿ, ಹತ್ತು ಹಗಲು ನವದುರ್ಗೆಯರನ್ನು ಪೂಜಿಸುವುದು ವೈಶಿಷ್ಟ್ಯ. ಹೀಗಾಗಿ ನವಪುಷ್ಪ, ನವಧಾನ್ಯ, ನವ ತರಕಾರಿ, ಆಹಾರ ಪದಾರ್ಥ, ರೇಷ್ಮೆ ಸೀರೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ದೇವತೆಗಳ ಮೂರ್ತಿಯನ್ನು ವೈಭವೋಪೇತವಾಗಿ ನಿತ್ಯ ಅಲಂಕರಿಸಲಾಗುತ್ತದೆ.
ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ಪಾಳೆಗಾರರ ಕುಲದೈವ ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲಗಳಲ್ಲಿ ಮೂಲ ಮತ್ತು ಉತ್ಸವಮೂರ್ತಿಗಳಿಗೆ ನವರಾತ್ರಿಯಲ್ಲಿ ನಿತ್ಯವೂ ವಿವಿಧ ಬಗೆಯ ಅಲಂಕಾರ ಸೇವೆ ಜರುಗಲಿದ್ದು, ಅ. 5ರವರೆಗೂ ಭಕ್ತರ ಕಣ್ಮನ ಸೆಳೆಯಲಿವೆ.
ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಅಂಬಾಭವಾನಿ, ದಾನಮ್ಮ, ಗೋಪಾಲಪುರದ ದುರ್ಗಾಪರಮೇಶ್ವರಿ, ಕರುವಿನಕಟ್ಟೆ ವೃತ್ತದ ಅಂತರಘಟ್ಟಮ್ಮ, ಕೋಟೆಯಲ್ಲಿನ ಬನಶಂಕರಮ್ಮ, ಬುರುಜನಹಟ್ಟಿಯ ಬನಶಂಕರಿ, ರೇಣುಕಾಯಲ್ಲಮ್ಮ ದೇವಿ ದೇಗುಲಗಳಲ್ಲೂ ನವರಾತ್ರಿ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.
ಬರಗೇರಮ್ಮ ದೇವಿಗೆ ವಿಶೇಷ ಪೂಜೆ
ಒಂಬತ್ತು ದಿನವೂ ಬರಗೇರಮ್ಮ ದೇವಿಗೆ ವಿಶೇಷ ಪೂಜೆ ಜೊತೆಗೆ ಅಲಂಕಾರ ಸೇವೆ ನಡೆಯಲಿದೆ. ನವರಾತ್ರಿಯಲ್ಲಿ ಮಾತ್ರ ನಿತ್ಯ ಬೆಳಗ್ಗೆ 5.30ಕ್ಕೆ ದೇವಿಗೆ ಮಹಾಮಂಗಳಾರತಿ, ಬನ್ನಿ ಪೂಜೆ ಜರುಗಲಿದೆ. ಭಕ್ತರಿಗೆ ದರ್ಶನಕ್ಕೆ ರಾತ್ರಿ 8ರವರೆಗೂ ಅವಕಾಶ ಕಲ್ಪಿಸಲಾಗಿದೆ. ವಿಜಯದಶಮಿ ಹಬ್ಬವಾದ ಮರುದಿನ ದೇವಿಯ ಕೆಂಡಾರ್ಚನೆ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭನೆಯಿಂದ ನೆರವೇರಲಿದೆ ಎಂದು ದೇಗುಲದ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.
ಅ. 5ಕ್ಕೆ ಉಚ್ಚಂಗಿಯಲ್ಲಮ್ಮ ಕೆಂಡೋತ್ಸವ
ನಗರದೇವತೆ ಉಚ್ಚಂಗಿಯಲ್ಲಮ್ಮ ದೇಗುಲದಲ್ಲಿ ನವರಾತ್ರಿ ಪೂಜೆಗಾಗಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಕೋವಿಡ್ ಕಾರಣಕ್ಕೆ ರದ್ದಾಗಿದ್ದ ಬನ್ನಿಮಹಾಕಾಳಮ್ಮ, ಉಚ್ಚಂಗಿಯಲ್ಲಮ್ಮ ದೇವಿಯ ಕೆಂಡೋತ್ಸವ ಈ ಬಾರಿ ಅ. 5ರ ವಿಜಯದಶಮಿ ದಿನದಂದು ಹಿಂದಿಗಿಂತಲೂ ಅದ್ಧೂರಿಯಾಗಿ ಜರುಗಲಿದೆ ಎಂದು ಅರ್ಚಕ ಅಭಿಷೇಕ್ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಸಿಹಿನೀರು ಹೊಂಡದಲ್ಲಿ ದೇವಿಗೆ ಗಂಗಾಪೂಜೆಯಾದ ಬಳಿಕ ಸಂತೆಹೊಂಡ ಸಮೀಪದ ಬನ್ನಿಮಹಾಕಾಳಮ್ಮ ದೇಗುಲದ ಮುಂಭಾಗ ನೂರಾರು ಭಕ್ತರ ಸಮ್ಮುಖದಲ್ಲಿ ಕೆಂಡೋತ್ಸವ ನೆರವೇರಲಿದೆ. ಜತೆಗೆ ಬನ್ನಿ ಮುಡಿಯುವ ಸಂಪ್ರದಾಯ ಎಂದಿನಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ನವರಾತ್ರಿಗೆ ದೇವಿ ದೇಗುಲಗಳು ಅಷ್ಟೇ ಅಲ್ಲದೆ, ಶಿವ, ಗಣಪತಿ, ವೆಂಕಟೇಶ್ವರ ಸ್ವಾಮಿ ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ಜರುಗಲಿವೆ. ದೇವಿ ಮೂರ್ತಿ ಪ್ರತಿಷ್ಠಾಪಿಸಲು ಕೆಲವೆಡೆ ಪೆಂಡಾಲ್ ನಿರ್ಮಿಸಲಾಗಿದೆ.