ತ್ರಿಕೋಟಿ ಶಿವಲಿಂಗ ಸ್ಥಾಪನೆಗೆ ಭೂಮಿಪೂಜೆ ಸೆ.13ರಂದು

10-LXR -6 MUKTHIMMANDIR BHUMIPUJE
Published on

ಲಕ್ಷ್ಮೇಶ್ವರ: ‘ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ವಿಶ್ವಮಾನವ ಸಂದೇಶ ಸಾರಿದ ಪರಮ ತಪಸ್ವಿ, ವಿಶ್ವಕಲ್ಯಾಣ ಯೋಗೀಶ್ವರ ಲಿಂ.ವೀರಗಂಗಾಧರ ಜಗದ್ಗುರುಗಳ ಸಂಕಲ್ಪದಂತೆ ಭೂಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಗೆ ಸೆ.13ರಂದು ಬೆಳಿಗ್ಗೆ 11ಕ್ಕೆ ಭೂಮಿಪೂಜೆ ನೆರವೇರಲಿದೆ ಎಂದು ನೊಣವಿನಕೆರೆ ಕಾಡಸಿದ್ಧೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಾಚಾರ್ಯರು ತಿಳಿಸಿದರು.
ಭಾನುವಾರ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಸರ್ವಧರ್ಮ ಸಮನ್ವಯಾಚಾರ್ಯ ಲಿಂ.ವೀರಗಂಗಾಧರ ಜಗದ್ಗುರುಗಳು ಈ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ತ್ರಿಕೋಟಿ ಶಿವಲಿಂಗ ಸ್ಥಾಪಿಸುವ ಸಂಕಲ್ಪ ಹೊಂದಿದ್ದರು. ಶ್ರೀ ಕ್ಷೇತ್ರದಲ್ಲಿ ಜಪ-ತಪಗಳ ಮುಖಾಂತರ ಭೂಕೈಲಾಸವನ್ನೇ ಸೃಷ್ಟಿಸಿರುವ ಲಿಂ. ಗಂಗಾಧರ ಶ್ರೀಗಳು ಲಿಂಗೈಕ್ಯರಾದ ಬಳಿಕ ಹಿರಿಯರು, ಭಕ್ತರ ಸಹಕಾರದಿಂದ 5 ಸಾವಿರ ಶಿವಲಿಂಗಗಳನ್ನು ಈಗಿನ ಪಟ್ಟಾಧ್ಯಕ್ಷರು ಸಂಗ್ರಹಿಸಿದ್ದಾರೆ. ಇದೀಗ ತ್ರಿಕೋಟಿ ಶಿವಲಿಂಗ ಪ್ರತಿಷ್ಠಾಪನೆಗೆ ಹೋಮ-ಹವನಾದಿಗಳೊಂದಿಗೆ ಭೂಮಿಪೂಜೆ ನೆರವೇರಲಿದೆ. ಇಂಜಿನಿಯರ್ ದಯಾನಂದ ನೇತೃತ್ವದಲ್ಲಿ 11 ತಿಂಗಳ ಅವಧಿಯಲ್ಲಿ ಈ ಕಾರ್ಯಪೂರ್ಣಗೊಳ್ಳಲಿದೆ. ತ್ರಿಕೋಟಿ ಶಿವಲಿಂಗ ಸ್ಥಾಪನೆ ಬಳಿಕ ಮುಕ್ತಿಮಂದಿರ ಧಾರ್ಮಿಕ ಕ್ಷೇತ್ರವಾಗಿ ಬೆಳಗಲಿದೆ. ಈ ಪರಮಶ್ರೇಷ್ಠ ಕಾರ್ಯದಲ್ಲಿ ಲಕ್ಷ್ಮೇಶ್ವರ, ಕುಂದಗೋಳ ತಾಲೂಕಿನ ಭಕ್ತಗಣವೆಲ್ಲ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಬಾಳೇಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಕೃಪಾಶೀರ್ವಾದದಿಂದ ಭೂಮಿಪೂಜೆ ನೆರವೇರಲಿದೆ. ಸರ್ವಧರ್ಮ ಸಮನ್ವಯ ಧರ್ಮಕ್ಷೇತ್ರದಲ್ಲಿ ಜಗದ್ಗುರುಗಳ ವೀರ ಸಂಕಲ್ಪದ ಈ ಕಾರ್ಯಕ್ರಮ ಪಕ್ಷಾತೀತವಾಗಿ ಜರುಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. 10ರಿಂದ 12 ಸಾವಿರ ಭಕ್ತ ಸಮೂಹ ಸಮಾರಂಭಕ್ಕೆ ಸಾಕ್ಷಿಯಾಗಲಿದೆ ಎಂದರು. ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ಬಸವರಾಜ ಕೊಟಗಿ, ಆನಂದ ಗಡ್ಡದೇವರಮಠ, ಎಂ.ಸಿದ್ದಲಿಂಗಯ್ಯ, ಎಂ.ಕೆ. ಕಳ್ಳಿಮಠ, ವಿರೂಪಾಕ್ಷ ಆದಿ, ಎಂ.ಎಂ. ಗದಗ, ಅಂಬರೀಶ ತೆಂಬದಮನಿ, ಬಸವಣ್ಣೆಪ್ಪ ನಂದೆಣ್ಣವರ, ಈಶ್ವರ ಬಂಡಿವಾಡ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net