

ಲಕ್ಷೆ್ಮೕಶ್ವರ: ರೋಣ ತಾಲೂಕು ಅಬ್ಬಿಗೇರಿಯಲ್ಲಿ ಜರುಗಲಿರುವ ದಸರಾ ದರ್ಬಾರ್ ಧರ್ಮ ಸಮ್ಮೇಳನಕ್ಕೆ ತೆರಳುತ್ತಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರು ಮಂಗಳವಾರ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಮನುಷ್ಯನ ಮನೋಭಾವನೆಗಳು ವಿಕಾಸವಾಗಿ ವಿಶಾಲವಾಗಿ ಬೆಳೆದಿದ್ದಾದರೆ ಎಲ್ಲೆಡೆ ಶಾಂತಿ ನೆಮ್ಮದಿ ಮೂಡಿಬರಲು ಸಾಧ್ಯವಿದೆ. ಈ ಸಂಗತಿಯನ್ನು ಮನವರಿಕೆ ಮಾಡಿಕೊಡುವುದೇ ದಸರಾ ದರ್ಬಾರ್ ಧರ್ಮ ಸಮ್ಮೇಳನದ ಆಶಯವಾಗಿದೆ. ಧರ್ಮಜಾಗೃತಿಯ ಜತೆಗೆ ದೇಶ ಪ್ರೇಮ, ರಾಷ್ಟ್ರೀಯ ಭಾವೈಕ್ಯ, ಸ್ವಧರ್ಮನಿಷ್ಠೆ, ಪರಧರ್ಮ ಸಹಿಷ್ಣುತೆ ಬಗ್ಗೆ ತಿಳಿಸುವ ಮೂಲಕ ಜನಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯುತ್ತದೆ. ಶರನ್ನವರಾತ್ರಿ ದಸರಾ ದರ್ಬಾರ್ನಲ್ಲಿ ಅಂತರಂಗದಲ್ಲಿ ಅಡಗಿರುವ ದುರ್ಗಣಗಳನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ಧರ್ಮಬೋಧೆ ನಡೆಯುತ್ತದೆ. ನಾಡು, ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂಬುದು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಸದಾಶಯವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ರಂಭಾಪುರಿ ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಜಗದ್ಗುರುಗಳ 33ನೇ ವರ್ಷದ ದಸರಾ ಮಹೋತ್ಸವ ಅ.3ರಿಂದ 12ರ ವರೆಗೆ ಅಬ್ಬಿಗೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಉಪಸ್ಥಿತರಿದ್ದರು.