

ಲಕ್ಷ್ಮೇಶ್ವರ: ಮಳೆಗಾಲದಲ್ಲಿ ಪಟ್ಟಣದ ವಿವಿಧ ವಾರ್ಡ್ಗಳ ದೊಡ್ಡ ಚರಂಡಿ, ರಾಜಕಾಲುವೆಗಳು ತುಂಬಿ ಹರಿದು ಅವಾಂತರ ಸೃಷ್ಟಿಸುವುದನ್ನು ತಪ್ಪಿಸಲು ಪುರಸಭೆ ಸ್ವಚ್ಛತಾ ಕಾರ್ಯ ಕೈಗೊಂಡಿದೆ.
8-10 ದಿನಗಳಿಂದ ಪೌರ ಕಾರ್ವಿುಕರು, ಜೆಸಿಬಿ ಬಳಸಿ ಚರಂಡಿಗಳ ಹೂಳೆತ್ತಲಾಗುತ್ತಿದೆ. ಕೋವಿಡ್ ಕಾರ್ಯದ ನಡುವೆಯೂ ಪುರಸಭೆ ಕೈಗೊಂಡಿರುವ ಈ ಕಾರ್ಯ ಸ್ಥಳೀಯರಲ್ಲಿ ಸಂತಸ ಮೂಡಿಸಿದೆ. ಮಳೆ ಬಂದಾಗ ರಾಜಕಾಲುವೆ, ದೊಡ್ಡ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಯಲ್ಲಿ ಹರಿದು, ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿತ್ತು. ಇದನ್ನು ತಪ್ಪಿಸಲು ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ, ಅಧ್ಯಕ್ಷ-ಉಪಾಧ್ಯಕ್ಷರು, ಹಿರಿಯ ಸದಸ್ಯರು ಸ್ಥಳ ಪರಿಶೀಲಿಸಿ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ.
ಕ್ರಿಯಾಯೋಜನೆಯಲ್ಲಿನ ಕಾಮಗಾರಿಗಳು: ವಾರ್ಡ್ 1, 2, 3, 4, 5, 7 ಹಾಗೂ 11ರ ಜನವಸತಿ ಪ್ರದೇಶದಲ್ಲಿರುವ ಸುಮಾರು 3 ಕಿಮೀ ಇರುವ ಲಂಡಿ ನಾಲಾ ರಾಜಕಾಲುವೆ ಯಲ್ಲಿನ ಗಿಡಗಂಟಿ, ತ್ಯಾಜ್ಯ, ಹೂಳು ತೆಗೆದು ಸ್ವಚ್ಛ ಗೊಳಿಸುವುದು. ಲಕ್ಷ್ಮೇಶ್ವರ-ಹುಬ್ಬಳ್ಳಿ ರಸ್ತೆ ಪಂಪ ವೃತ್ತದಿಂದ ಜಯದೇವ ವೃತ್ತದವರೆಗೆ ಆರ್ಸಿಸಿಯ ದೊಡ್ಡ ಚರಂಡಿ ಸ್ವಚ್ಛಗೊಳಿಸುವುದು, ಈದ್ಗಾ ಮೈದಾನದಿಂದ ಕೆವಿಜಿ ಬ್ಯಾಂಕ್ ಮುಖ್ಯ ಚರಂಡಿವರೆಗೆ ಸ್ವಚ್ಛಗೊಳಿಸುವುದು, ಇಟ್ಟಿಗೆಕೆರೆಗೆ ಮಳೆ ನೀರು ಸರಾಗವಾಗಿ ಹರಿದು ಬರಲು 1 ಕಿಮೀ ಮಾರ್ಗ ಸ್ವಚ್ಛಗೊಳಿಸುವುದು. ಪಂಪ ವೃತ್ತದಿಂದ ಬಸ್ತಿ ಬಣದ ಮುಖಾಂತರ ಹಾಯ್ದು ಹೋಗುವ ವಿದ್ಯಾರಣ್ಯ ವೃತ್ತ, ಹಾವಳಿ ಹನುಮಂತ ದೇವಸ್ಥಾನದವರೆಗಿನ ಚರಂಡಿ ಸ್ವಚ್ಛಗೊಳಿಸುವ ಕಾಮಗಾರಿಗಳು ಈ ಕ್ರಿಯಾಯೋಜನೆಯಲ್ಲಿವೆ.
ಜಿಲ್ಲಾಧಿಕಾರಿ ಆದೇಶದಂತೆ ದೊಡ್ಡ ಚರಂಡಿಗಳು, ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಬಹುದಿನಗಳ ಬೇಡಿಕೆಯಾಗಿದ್ದ ಲಂಡಿ ನಾಲಾ ಸ್ವಚ್ಛತೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಅದರಂತೆ ಉಳಿದೆಲ್ಲ ಚರಂಡಿ, ಕೆರೆ ಮಾರ್ಗದ ಕಾಲುವೆ ಸ್ವಚ್ಛತೆ ಕಾರ್ಯಗಳನ್ನು ಪೌರಕಾರ್ವಿುಕರು, ಸಿಬ್ಬಂದಿ ಕೈಗೊಂಡಿದ್ದಾರೆ. ಇದರಿಂದ ಮಳೆಯಿಂದ ಆಗುವ ಹಾನಿ ಈ ಬಾರಿ ಕಡಿಮೆಯಾಗಲಿದೆ.| ಶಂಕರ ಹುಲ್ಲಮ್ಮನವರ, ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿಮಳೆ ಬಂದಾಗ ಚರಂಡಿ ತುಂಬಿ ಮನೆ ಮುಂದಿನ ರಸ್ತೆಯಲ್ಲಿ ನೀರು ನಿಲ್ಲುತ್ತಿತ್ತು. ಅದರಿಂದ ನಿವಾಸಿಗಳು, ಜನರ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಪ್ರತಿ ಸಾರಿ ಪುರಸಭೆಯವರು ತಾತ್ಕಾಲಿಕ ಪರಿಹಾರ ಕಾರ್ಯ ಕೈಗೊಳ್ಳುತ್ತಿದ್ದರು. ಅನೇಕ ವರ್ಷಗಳಿಂದ ಚರಂಡಿಯಲ್ಲಿದ್ದ ಐದಾರು ಅಡಿಯಷ್ಟು ಹೂಳನ್ನು ತೆಗೆದಿರಲಿಲ್ಲ. ಈಗ ಪುರಸಭೆ ವಿಶೇಷ ಕಾರ್ಯ ಕೈಗೊಂಡಿರುವುದು ನೆಮ್ಮದಿ ತಂದಿದೆ.| ಮಂಜು ಗಾಂಜಿ, ಜಿ.ಎಂ. ಗಾಣಿಗೇರ, ಲಕ್ಷ್ಮೇಶ್ವರ ನಿವಾಸಿಗಳು