ಪೂರ್ಣಿಮಾ ಕೈಗೆ ಲಕ್ಷ್ಮೇಶ್ವರ ಪುರಸಭೆ ಚುಕ್ಕಾಣಿ

4 lxr 2
Published on

ಲಕ್ಷ್ಮೇಶ್ವರ: ಪುರಸಭೆಯ ಅಧ್ಯಕ್ಷರಾಗಿ ಪೂರ್ಣಿಮಾ ಮಂಜುನಾಥಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ರಾಮಪ್ಪ ಗಡದವರ ಪಕ್ಷಾತೀತವಾಗಿ ಅವಿರೋಧ ಆಯ್ಕೆಯಾದರು.

ಬುಧವಾರ ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಭ್ರಮರಾಂಬ ಗುಬ್ಬಿಶೆಟ್ಟಿ ಅವಿರೋಧ ಆಯ್ಕೆ ಘೊಷಿಸಿದರು. ಪೂರ್ಣಿಮಾ ಪಾಟೀಲ ಬಿಜೆಪಿಯಿಂದ ಹಾಗೂ ರಾಮಪ್ಪ ಗಡದವರ ಕಾಂಗ್ರೆಸ್​ನಿಂದ ಪುರಸಭೆಗೆ ಚುನಾಯಿತರಾಗಿದ್ದಾರೆ.

23 ಸದಸ್ಯರ ಸಂಖ್ಯಾಬಲ ಹೊಂದಿರುವ ಪುರಸಭೆಯಲ್ಲಿ ಕಾಂಗ್ರೆಸ್ 9, ಬಿಜೆಪಿ 7, ಇಬ್ಬರು ಜೆಡಿಎಸ್ ಹಾಗೂ ಐವರು ಪಕ್ಷೇತರ ಸದಸ್ಯರಿದ್ದಾರೆ. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತವಿರಲಿಲ್ಲ. ಕಳೆದ ಅವಧಿಯಂತೆ ಈ ಅವಧಿಗೂ ಪಟ್ಟಣದ ಅಭಿವೃದ್ಧಿಯ ದೃಷ್ಟಿಯಿಂದ ಲಕ್ಷ್ಮೇಶ್ವರ ಹಿತಾಭಿವೃದ್ಧಿ ಸಮಿತಿಯ ಹಿರಿಯರು, ಶಾಸಕರು, ಮಾಜಿ ಶಾಸಕರು ಮತ್ತು ಸರ್ವ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಪಕ್ಷಾತೀತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹಿರಿಯ ಸದಸ್ಯರಾದ ಜಯಕ್ಕ ಕಳ್ಳಿ, ರಾಜಣ್ಣ ಕುಂಬಿ, ಮಹೇಶ ಹೊಗೆಸೊಪ್ಪಿನ, ಬಸವರಾಜ ಓದುನವರ ಸೇರಿದಂತೆ 23 ಸದಸ್ಯರು ಹಾಜರಿದ್ದರು. ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು. ಡಾ.ಭೀಮಸಿಂಗ್ ರಾಥೋಡ, ಸೋಮಣ್ಣ ಬೆಟಗೇರಿ, ಸೋಮೇಶ ಉಪನಾಳ, ಗಂಗಾಧರ ಮೆಣಸಿನಕಾಯಿ, ದುಂಡೇಶ ಕೊಟಗಿ, ತಾವರೆಪ್ಪ ಲಮಾಣಿ, ಶಕ್ತಿ ಕತ್ತಿ, ಶರಣು ಗೋಡಿ, ನೀಲಪ್ಪ ಹತ್ತಿ, ಎಂ.ಆರ್. ಪಾಟೀಲ, ಮಂಜು ಮಾಗಡಿ, ವಿಜಯ ಜಾವೂರ, ಸಂಜೀವ ಚಾಕಲಬ್ಬಿ, ಎಂ.ಎಂ. ಗದಗ, ಕಿರಣ ನವಲೆ ಇತರರಿದ್ದರು.

ಶಾಸಕರು, ಮಾಜಿ ಶಾಸಕರು, ಹಿರಿಯರು ಹಾಗೂ ಎಲ್ಲ ಸದಸ್ಯರ ಮಾರ್ಗದರ್ಶನ ಮತ್ತು ಸಹಕಾರದಿಂದ ಪಟ್ಟಣದ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುತ್ತದೆ. ಕಳೆದ 2 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮುಖ್ಯ ಕಾರ್ಯಗಳನ್ನು ಕೈಗೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇವೆ. | ಪೂರ್ಣಿಮಾ ಎಂ. ಪಾಟೀಲ, ರಾಮಪ್ಪ ಗಡದವರ, ನೂತನ ಅಧ್ಯಕ್ಷೆ, ಉಪಾಧ್ಯಕ್ಷರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net