ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಿಸಲಿ

9-LXR-2 RAITH SANGH
Published on

ಲಕ್ಷ್ಮೇಶ್ವರ: ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು. ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಅಖಂಡ ರಾಜ್ಯ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ ಹೇಳಿದರು. ಪಟ್ಟಣದಲ್ಲಿ ಸೋಮವಾರ ರಾಜ್ಯ ರೈತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ತಾಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಆಯಾ ಜಿಲ್ಲೆಯಲ್ಲಿ ರೈತರು ಯಾವ ಬೆಳೆ ಹೆಚ್ಚು ಬೆಳೆಯುತ್ತಾರೋ ಅಲ್ಲಿ ಸಂಬಂಧಿತ ಬೆಳೆಯಿಂದ ತಯಾರಿಸಬಹುದಾದ ಉತ್ಪನ್ನಗಳ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಸ್ಥಾಪಿಸಬೇಕು. ರೈತರ ಮಕ್ಕಳಿಗೆ ಯಾರು ಕನ್ಯೆ ಕೊಡುತ್ತಾರೋ ಆ ಮಹಿಳೆಯರಿಗೆ 5 ಲಕ್ಷ ರೂ. ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದರು. ಸಂಘದ ಹಾವೇರಿ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ ಮಾತನಾಡಿದರು. ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷರಾಗಿ ಮಂಜಪ್ಪ ಸುಣಗಾರ ಅವರನ್ನು ಆಯ್ಕೆ ಮಾಡಲಾಯಿತು. ಗದಗ ಜಿಲ್ಲಾ ಉಪಾಧ್ಯಕ್ಷ ಶಂಕ್ರಪ್ಪ ರಾಹುತ್, ಹಾಲೇಸಾಬ್ ನದಾಫ್, ಹನುಮಂತಪ್ಪ ಬೆಳಗಟ್ಟಿ, ನಿಂಗನಗೌಡ ಪಾಟೀಲ, ಸೈಯದ್ ಅಲಿ ನದಾಫ್, ಬಸವರಾಜ ದೇವಗಿರಿ, ಸಹದೇವಪ್ಪ ಹರಿಜನ, ಶಂಕಪ್ಪ ಮಾಗಡಿ, ಪರಶುರಾಮ ಬೂದಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net