ಧರ್ಮ ಉಳಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖ

12-lxr-3a mukthimandir
Published on

ಲಕ್ಷೆ್ಮೕಶ್ವರ: ಭಾರತೀಯ ಧರ್ಮ, ಸಂಸ್ಕೃತಿ, ಪರಂಪರೆ ಉಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ ಮತ್ತು ಮಹಿಳೆಯರಿಗೆ ಸಮಾಜದಲ್ಲಿ ಪೂಜ್ಯನೀಯ ಸ್ಥಾನವಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ಪಟ್ಟಣದ ಸೋಮೇಶ್ವರ ಪಾದಗಟ್ಟಿ ಬಳಿಯ ಬನ್ನಿಮಹಾಂಕಾಳಿ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಮಹಾನವಮಿ ವಿಶೇಷ ಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮಹಿಳೆಯರು ಗೌರವಿಸಲ್ಪಡುವ ಸ್ಥಳಗಳಲ್ಲಿ ದೇವತೆಗಳು ನೆಲೆಸುತ್ತಾರೆ. ಸಮಾಜದಲ್ಲಿ ಹಬ್ಬ-ಹರಿದಿನ, ಆಚರಣೆ, ಸಂಪ್ರದಾಯಿಕ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬಿ ಗೌರವಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಮಹಿಳೆಯರು ಮಕ್ಕಳಿಗೆ ಬಾಲ್ಯದಲ್ಲಿ ನಮ್ಮ ಹಬ್ಬ-ಹರಿದಿನ ಆಚರಣೆ, ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ಅರಿವು-ಅಭಿಮಾನ ಮೂಡಿಸಬೇಕು. ರೈತರ ಸಂಕಷ್ಟಗಳು ದೂರವಾಗಿ ಬದುಕು ಬಂಗಾರವಾಗಲು ದೇವಿಯ ಕಪಾಶೀರ್ವಾದ ಲಭಿಸಲಿ ಎಂದರು.

ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳಾದ ಹಬ್ಬ, ಆಚರಣೆ, ಪೂಜೆ, ಪ್ರಾರ್ಥನೆಯಿಂದ ಪರಸ್ಪರಲ್ಲಿ ಬಾಂಧವ್ಯ ವೃದ್ಧಿಯಾಗುತ್ತದೆ. ನ್ಯಾಯ, ನೀತಿ, ಧರ್ಮ, ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ದೇವಿ ಆರಾಧನೆಯಿಂದ ನಮ್ಮಲ್ಲಿರುವ ದುರ್ಗಣಗಳು ದೂರವಾಗಿ ಸದ್ಗುಣಗಳ ಪ್ರಾಪ್ತಿಯಾಗಲಿದೆ ಎಂದರು.

ಬಸವೇಶ ಮಹಾಂತಶೆಟ್ಟರ ಮಾತನಾಡಿ, ಶ್ರೀ ಸೋಮೇಶ್ವರ ದೇವಸ್ಥಾನದ ಪಾದಗಟ್ಟಿಯ ಬನ್ನಿಮಹಾಂಕಾಳಿ ಮಂಟಪಕ್ಕೆ ವಿಜಯದಶಮಿ ದಿನ ಪಟ್ಟಣದ ಎಲ್ಲ ದೇವಸ್ಥಾನಗಳ ಉತ್ಸವಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಸಮೇತ ಆಗಮಿಸಿ ಇಲ್ಲಿ ಬನ್ನಿ ಮುಡಿದ ನಂತರವೇ ಪಟ್ಟಣದಲ್ಲಿ ಬನ್ನಿ-ವಿನಿಮಯ ಹಬ್ಬ ಆರಂಭವಾಗುತ್ತದೆ ಎಂದರು.

ಪಿಎಸ್​ಐ ಈರಪ್ಪ ರಿತ್ತಿ, ಯಲ್ಲಪ್ಪ ಪಲ್ಲೇದ, ಗುರಣ್ಣ ಪಾಟೀಲ ಕುಲಕರ್ಣಿ, ಅಶ್ವಿನಿ ಅಂಕಲಕೋಟಿ, ಸುನೀಲ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ನೀಲಪ್ಪ ಕನವಳ್ಳಿ, ಚನ್ನಪ್ಪ ಚಿಂಚಲಿ, ಭರಮಪ್ಪ ಕೊಡ್ಲಿ, ಸಿದ್ದನಗೌಡ ಬಳ್ಳೊಳ್ಳಿ, ಮುದಕನಗೌಡ ಪಾಟೀಲ, ಬಂಗಾರಪ್ಪ ಮುಳಗುಂದ, ವಿರೂಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ಶೇಖಪ್ಪ ಹುರಕಡ್ಲಿ, ನಂದೀಶ ಬಂಡಿವಾಡ ಇತರರಿದ್ದರು. ಉಮೇಶ ನೇಕಾರ, ಸ್ನೇಹಾ ಹೊಟ್ಟಿ ನಿರ್ವಹಿಸಿದರು. ನೂರಾರು ಮಹಿಳೆಯರಿಗೆ ಉಡಿ ತುಂಬಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net