

ಲಕ್ಷ್ಮೇಶ್ವರ: ಹಿಂದುಗಳಿಗೆ ಶ್ರಾವಣ ಅತ್ಯಂತ ಪವಿತ್ರ ಮಾಸ. ಈ ತಿಂಗಳಲ್ಲಿ ಪುರಾಣ ಪ್ರವಚನ ಆಲಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರತಿಯೊಬ್ಬರೂ ಜೀವನದಲ್ಲಿ ದೇವರು, ಧರ್ಮಕಾರ್ಯ, ದಾನ, ದಯೆ, ಮಾನವಿಯತೆಯನ್ನು ರೂಢಿಸಿಕೊಳ್ಳಬೇಕು ಎಂದು ಮುಕ್ತಿಮಂದಿರ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧಾರೂಢರ ಪುರಾಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಯಾರು ಆಧ್ಯಾತ್ಮ ಮಾರ್ಗದಲ್ಲಿ ನಡೆಯುತ್ತಾರೋ ಅವರಿಗೆ ಧರ್ಮ ಅತಿ ಹತ್ತಿರದಲ್ಲಿ ಇರುತ್ತದೆ. ಎಲ್ಲರ ಹೃದಯದಲ್ಲೂ ಪರಮಾತ್ಮ ನೆಲೆಸಿರುತ್ತಾನೆ. ನಮ್ಮ ಹಿರಿಯರು ತೋರಿದ ಸನ್ಮಾರ್ಗ, ಸಂಸ್ಕೃತಿ, ಆಚರಣೆ, ಸಂಪ್ರದಾಯಗಳನ್ನು ಯಾರೂ ಮರೆಯಬಾರದು ಎಂದರು. ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಆಧ್ಯಾತ್ಮ ನಮ್ಮ ಸಂಸ್ಕೃತಿಯಾಗಿದೆ. ಆಧ್ಯಾತ್ಮವಿಲ್ಲದೆ ಸಮಾಜವಿಲ್ಲ. ನಮ್ಮ ನಾಡಿನ ಸಂಸ್ಕೃತಿ, ಸಂಪ್ರದಾಯಗಳು ನಮ್ಮ ಹಿರಿಮೆ, ಅವುಗಳನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ ಎಂದರು. ಸುವರ್ಣಾಬಾಯಿ ಬಹಾದ್ದೂರದೇಸಾಯಿ, ರೋಹಿಣಿಬಾಯಿ ಬಹಾದ್ದೂರ ದೇಸಾಯಿ, ಜಯಲಕ್ಷ್ಮೀ ಗಡ್ಡದೇವರಮಠ, ಶಾರಕ್ಕ ಮಹಾಂತಶೆಟ್ಟರ, ಜಯಲಕ್ಷ್ಮೀ ಮಹಾಂತಶೆಟ್ಟರ, ಸಾವಿತ್ರಮ್ಮ ಹೂವಿನ, ಎಂ. ಸಿದ್ದಲಿಂಗಯ್ಯ, ಜೆ.ಡಿ. ಲಮಾಣಿ, ಕಾವ್ಯಾ ದೇಸಾಯಿ ಜಾನಾನಾಯಕ್, ರೂಪಾ ನವಲೆ ಇದ್ದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಫಕೀರೇಶ ಚಕಾರದ, ಇಂದುಮತಿ ಜಕ್ಕನಗೌಡ್ರ, ಸ್ವಾತಿ ಪೈ ಹಾಗೂ ಪುರಾಣ ಪ್ರವಚನಕಾರ ಪ್ರಭುಗೌಡ ಎಕ್ಕಿಕೊಪ್ಪ ಅವರನ್ನು ಸನ್ಮಾನಿಸಲಾಯಿತು.