ಎತ್ತುಗಳ ಬೆಲೆ ಗಗನಮುಖಿ

18-lxr ox
Published on

ಲಕ್ಷ್ಮೇಶ್ವರ: ಉತ್ತಮ ಮಳೆಯಿಂದ ಕೃಷಿ ಚಟುವಟಿಕೆ ಚುರುಕುಗೊಂಡಿವೆ. ಇದರಿಂದ ರೈತರ ಜೀವನಾಡಿ ಎತ್ತುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಎತ್ತುಗಳ ಬೆಲೆ ಗಗನಕ್ಕೇರಿದೆ.
ಕಳೆದ ವಷರ್ ಬರಗಾಲದ ಸಂಕಷ್ಟದ ಜತೆಗೆ ಹೊಟ್ಟು- ಮೇವು ಕೊರತೆ, ಕೃಷಿ ಚಟುವಟಿಕೆ ಇಲ್ಲದಿರುವುದು ಮತ್ತು ನಿರ್ವಹಣೆ ಸಮಸ್ಯೆಯಿಂದ ರೈತರು ಕಡಿಮೆ ಬೆಲೆಗೆ ಎತ್ತುಗಳನ್ನು ಮಾರಾಟ ಮಾಡಿದ್ದರು. ಈ ವರ್ಷದ ಮುಂಗಾರು ರೈತರಲ್ಲಿ ಹೊಸ ಭರವಸೆ ಮೂಡಿಸಿದ್ದು, ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷ ಹೊಟ್ಟು, ಮೇವಿನ ಕೊರತೆಯಿಂದ ಎತ್ತುಗಳನ್ನು ಕೈಗೆ ಬಂದ ದರಕ್ಕೆ ಮಾರಾಟ ಮಾಡಿದ್ದರು. ಬೇಸಿಗೆಯಲ್ಲಿ ಟ್ರಾೃಕ್ಟರ್ ಮೂಲಕ ರಂಟೆ, ಕುಂಟಿ ಹೊಡೆಸಿದ್ದರು. ಆದರೆ, ಈಗ ಬಿತ್ತುವ ಮತ್ತು ಎಡೆ ಹೊಡೆಯುವ ಕೆಲಸಕ್ಕಾಗಿ ಎತ್ತುಗಳ ಅವಶ್ಯಕತೆ ಇದೆ. ಆರ್ಥಿಕವಾಗಿ ಪ್ರಬಲರಾದವರು ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ಜೋಡೆತ್ತುಗಳಿಗೆ ಬಲು ಬೇಡಿಕೆ ಬಂದಿದೆ. ಆದರೆ, ಸಂತೆಯಲ್ಲಿ ಎತ್ತುಗಳ ಬೆಲೆ ಕೇಳಿ ರೈತರು ಹುಬ್ಬೇರಿಸುತ್ತಿದ್ದಾರೆ.
ಹೆಸರು, ಉಳ್ಳಾಗಡ್ಡಿ, ಶೇಂಗಾ ಬೀಜವವನ್ನು ಎತ್ತುಗಳ ಮೂಲಕ ಬಿತ್ತುವುದರಿಂದ ಉತ್ತಮ ಇಳುವರಿ ಬರುತ್ತದೆಂಬ ನಂಬಿಕೆ ಮತ್ತು ಎಡೆ ಹೊಡೆಯಲು ಎತ್ತುಗಳು ಬೇಕೆಬೇಕು. ಬಾಡಿಗೆ ಎತ್ತುಗಳಿಗೆ ದಿನದ ಬಾಡಿಗೆ 2,000 ರೂ. ಇದೆ. ಜತೆಗೆ ಟ್ರಾೃಕ್ಟರ್ ಬಾಡಿಗೆ-ಬೇಡಿಕೆಯೂ ಹೆಚ್ಚಾಗಿದೆ. ಬಾಡಿಗೆ ಕೊಟ್ಟರೂ ಬೇಕಾದ ಸಮಯದಲ್ಲಿ ಸಿಗುತ್ತಿಲ್ಲ. ಈ ಕಾರಣ ಕಾರ ಹುಣ್ಣಿಮೆಯೊಳಗೆ ಎತ್ತುಗಳನ್ನು ಖರೀದಿಸಲು ರೈತರು ಮುಂದಾಗಿದ್ದಾರೆ.
ಸಂತೆಯಲ್ಲಿ ಎತ್ತುಗಳನ್ನು ಮಾರಾಟ ಮಾಡುವವರಿಗಿಂತ ಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಎತ್ತುಗಳ ಬೆಲೆ ಗಗನಕ್ಕೇರಿದೆ. 2 ತಿಂಗಳ ಹಿಂದೆಯಷ್ಟೇ 60 ಸಾವಿರದಿಂದ 1 ಲಕ್ಷ ರೂ. ವರೆಗೆ ಮಾರಾಟವಾಗುತ್ತಿದ್ದ ಎತ್ತುಗಳ ಬೆಲೆ ಈಗ 80 ಸಾವಿರದಿಂದ 1.50 ಲಕ್ಷ ರೂ.ವರೆಗೆ ತಲುಪಿದೆ. ಎರಡು ಹಲ್ಲಿನ ಎತ್ತುಗಳ ಬೆಲೆ ಲಕ್ಷ ರೂ. ದಾಟಿದ್ದು 1 ರಿಂದ 1.50 ಲಕ್ಷ ರೂ.ವರೆಗೂ ಮಾರಾಟವಾಗಿವೆ. ನಾಲ್ಕು ಹಲ್ಲಿನ ಎತ್ತುಗಳ ಬೆಲೆ 80 ರಿಂದ 90 ಸಾವಿರ ರೂ. ತಲುಪಿದೆ. 70 ಸಾವಿರ ರೂ.ಒಳಗೆ ಎತ್ತುಗಳು ಸಿಗುವುದೇ ಇಲ್ಲ. ಎತ್ತುಗಳ ಬೆಲೆ ಕೇಳಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಹೋಗುತ್ತಿದ್ದಾರೆ.
ಈ ಬಾರಿ ಸಮೃದ್ಧ ಬೆಳೆ ಬಂದರೆ ತಮ್ಮೆಲ್ಲ ಸಂಕಷ್ಟ ಬದಿಗೊತ್ತಿ ಹಂಗಾಮು ಮುಗಿದ ಬಳಿಕ ಎತ್ತುಗಳನ್ನು ಮಾರಾಟ ಮಾಡದೆ ಜೋಪಾನ ಮಾಡುವ ಯೋಚನೆಯಲ್ಲಿದ್ದಾರೆ ರೈತರು.

ಮುಂಗಾರು- ಹಿಂಗಾರು ಸಂಪೂರ್ಣ ಕೈಕೊಟ್ಟು ಬರಗಾಲ ಆವರಿಸಿದ್ದರಿಂದ ದನಕರುಗಳಿಗೆ ಮೇವಿಲ್ಲದೆ ಜೋಪಾನ ಮಾಡಲು ಕಷ್ಟವಾಗಿ ಕೈಗೆ ಬಂದ ದರಕ್ಕೆ ಕೊಟ್ಟು ಹೋಗೇವ್ರೀ. ಎಂಥಾ ಚೋಲೋ ಇದ್ವು ನಮ ಎತ್ತಗೋಳ, ಬರೀ 60 ಸಾವಿರಕ್ಕೆ ಕೊಟ್ಟೆ. ಈಗ ನೋಡಿದ್ರ ಸೊಣಕಲು, ಮುದಿ ಎತ್ತುಗಳಿಗೂ ಲಕ್ಷ ರೂ. ಅಂತ ಹೇಳ್ತಾರ. ಹಿಂಗಾದ್ರ ನಮ್ಮಂತ ಸಣ್ಣ ರೈತ್ರು ಹೆಂಗ ಬದುಕೋದ್.ಮಲ್ಲೇಶಪ್ಪ ಉಮಚಗಿ, ರೈತ ಕಳೆದ ಮೂರ‌್ನಾಲ್ಕು ವಾರದಿಂದ ಎಪಿಎಂಸಿ ಪ್ರಾಂಗಣದಲ್ಲಿ ಪ್ರತಿ ಶುಕ್ರವಾರ ನಡೆಯುವ ಜಾನುವಾರು ಸಂತೆಗೆ ನೂರಾರು ಸಂಖ್ಯೆಯಲ್ಲಿ ಎತ್ತುಗಳು ಮಾರಾಟಕ್ಕೆ ಬರುತ್ತಿವೆ. ಮಾರಾಟ ಮಾಡುವ ಮತ್ತು ಖರೀದಿಸುವ ರೈತರು ರಸೀದಿ ಪಡೆಯಬೇಕು. ಇದರಿಂದ ರೈತರಿಗೆ ಅನುಕೂಲವಾಗಲಿದೆ.ಶಿವಾನಂದ ಮಠ ಎಪಿಎಂಸಿ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net