ಎರಡು ವರ್ಷವಾದ್ರೂ ಬಂದಿಲ್ಲ ನರೇಗಾ ಸಬ್ಸಿಡಿ

24-LXR KOTTIGE
Published on

ಲಕ್ಷೆ್ಮೕಶ್ವರ: ನರೇಗಾ ಯೋಜನೆ ಗ್ರಾಮೀಣ ಭಾಗದವರಿಗೆ ಆಸರೆಯಾಗಿದೆ. ಆದರೆ, ಈ ಯೋಜನೆಯಡಿ ದನದ ಗೊಡ್ಡಿ, ಇಂಗು ಗುಂಡಿ ನಿರ್ವಿುಸಿಕೊಂಡ ರೈತರು ಸಬ್ಸಿಡಿ ಹಣ ಬಾರದೆ ಪರಿತಪಿಸುತ್ತಿದ್ದಾರೆ. ಸರ್ಕಾರ ಬಡ ರೈತರ ಆರ್ಥಿಕ ಸ್ವಾವಲಂಬಿ ಬದುಕಿಗಾಗಿ ದನದ ದೊಡ್ಡಿ ಹಾಗೂ ಇಂಗು ಗುಂಡಿ ನಿರ್ಮಾಣ ಮಾಡಲು ನರೇಗಾ ಯೋಜನೆಯಡಿ ಸಹಾಯಧನ ನೀಡಿ ಪ್ರೋತ್ಸಾಹಿಸುತ್ತದೆ. 1 ದನದ ದೊಡ್ಡಿ ನಿರ್ವಣಕ್ಕೆ ಸುಮಾರು 57 ಸಾವಿರ ರೂ. ನೀಡುವ ಮೂಲಕ ರೈತರ ಜೀವನಾಡಿಗಳಾದ ಎತ್ತುಗಳ ರಕ್ಷಣೆಗೆ ಅನಕೂಲ ಮಾಡಿಕೊಟ್ಟಿದೆ. 2023- 24ನೇ ಸಾಲಿನಲ್ಲಿ ನಿರ್ಮಾಣ ಮಾಡಿಕೊಂಡಿರುವ ದನದ ದೊಡ್ಡಗಳಿಗೆ ಸರ್ಕಾರ ಇದುವರೆಗೆ ಸಹಾಯಧನ ಬಿಡುಗಡೆ ಮಾಡಿಲ್ಲ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ತಾಲೂಕಿನ 14 ಗ್ರಾಪಂ ವ್ಯಾಪ್ತಿಯಲ್ಲಿ 2023- 24ನೇ ಸಾಲಿನಲ್ಲಿ 300ಕ್ಕೂ ಹೆಚ್ಚು ದನದ ದೊಡ್ಡಿ ನಿರ್ಮಾಣ ಮಾಡಿರುವ ಫಲಾನುಭವಿಗಳು ಸಹಾಯಧನಕ್ಕಾಗಿ ಕಾಯುತ್ತಿದ್ದಾರೆ. ಅಡರಕಟ್ಟಿ ಗ್ರಾಪಂನಲ್ಲಿ 9, ಆದರಳ್ಳಿ-40, ಶಿಗ್ಲಿ-5, ಗೊಜನೂರ-7, ಸೂರಣಗಿ-55, ಬಾಲೆಹೊಸೂರ-70, ಹುಲ್ಲೂರ-52, ದೊಡ್ಡೂರ-54, ಬಟ್ಟೂರ-8, ಯಳವತ್ತಿ-10, ಪು.ಬಡ್ನಿ-0, ಶಿಗ್ಲಿ-5, ಮಾಡಳ್ಳಿ-11, ಗೋವನಾಳ-8 ಫಲಾನುಭವಿಗಳು ದನದ ದೊಡ್ಡಿ ನಿರ್ಮಾಣ ಮಾಡಿ ಸಹಾಯಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ. 2023- 24ಕ್ಕೂ ಮೊದಲು ಸರ್ಕಾರ ದನದ ದೊಡ್ಡಿ ನಿರ್ಮಾಣ ಮಾಡಿದ ಫಲಾನುಭವಿಗಳಿಗೆ ಹಣ ಹಾಕುವ ಕಾರ್ಯ ಮಾಡುತ್ತಿತ್ತು. ಆದರೆ ಹೀಗೆ ಹಣ ನೀಡುವ ವೇಳೆ ಮಧ್ಯವರ್ತಿಗಳು ಫಲಾನುಭವಿಗಳಿಂದ ಹಣಕ್ಕಾಗಿ ಪೀಡಿಸುತ್ತಿದ್ದರು ಎನ್ನುವ ಅಂಶ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ಮಧ್ಯವರ್ತಿಗಳಿಗೆ ಹಣ ನೀಡುವ ಬದಲು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹಾಕುವ ಯೋಜನೆ ಜಾರಿಗೊಳಿಸಿತು. ಪರಿಣಾಮವಾಗಿ 2023- 24ನೇ ಸಾಲಿನಲ್ಲಿ ನಿರ್ವಣವಾದ ದನದ ದೊಡ್ಡಿಗಳ ಸಹಾಯಧನ ಬಿಡುಗಡೆಯಾಗದೆ 300ಕ್ಕೂ ರೈತರು ಪರದಾಡುವಂತಾಗಿದೆ. ಸರ್ಕಾರ ದನದ ದೊಡ್ಡಿ ನಿರ್ಮಾಣ ಮಾಡಿರುವ ಫಲಾನುಭವಿಗಳಿಗೆ ಸಹಾಯಧನ ನೀಡಬೇಕು. ಸಹಾಯಧನಕ್ಕಾಗಿ ಗ್ರಾಪಂಗಳಿಗೆ 2 ವರ್ಷಗಳಿಂದ ಅಲೆದಾಡಿ ಸಾಕಾಗಿ ಹೋಗಿದೆ. ಈಗಲಾದರೂ ದನದ ದೊಡ್ಡಿ ನಿರ್ವಣದ ಸಹಾಯಧನ ನೀಡುವ ಮೂಲಕ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ದೊಡ್ಡೂರ ಗ್ರಾಮದ ಹನುಮಂತಪ್ಪ ಲಮಾಣಿ ಹಾಗೂ ಯಲ್ಲಾಪುರ ಗ್ರಾಮದ ನಿಂಗಪ್ಪ ಅಕ್ಕೂರ ಅವರು ಆಗ್ರಹಿಸಿದ್ದಾರೆ.

ಸರ್ಕಾರ 2023- 24ನೇ ಸಾಲಿನಲ್ಲಿ ಮಧ್ಯವರ್ತಿಗಳ ಮೂಲಕ ದನದ ದೊಡ್ಡಿ ನಿರ್ಮಾಣ ಮಾಡಿದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹಾಕುತ್ತಿದ್ದರು. ಮಧ್ಯವರ್ತಿಗಳು ಫಲಾನುಭವಿಗಳಿಗೆ ಹಣವನ್ನು ನೀಡದೆ ಸತಾಯಿಸುತ್ತಿದ್ದರು. ಆಗ ಸರ್ಕಾರ ಮಧ್ಯವರ್ತಿಗಳ ಬದಲು ನೇರವಾಗಿ ಫಲಾನುಭವಿಗಳಿಗೆ ಹಣ ಹಾಕುವ ಆದೇಶ ಮಾಡಿದೆ. ಇದರಿಂದ ಸ್ವಲ್ಪ ವಿಳಂಬವಾಗಿದೆ. ರೈತರಿಗೆ ಹಣ ಖಂಡಿತವಾಗಿಯೂ ದೊರೆಯುತ್ತದೆ. ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಶಿವಕುಮಾರ ವಾಲಿ ದೊಡ್ಡೂರ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net