

ಲಕ್ಷೆ್ಮೕಶ್ವರ: ಪ್ರತಿಯೊಬ್ಬರೂ ಪರಸ್ಪರ ಪ್ರೀತಿ, ಸಹನೆ, ಆದರ್ಶ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸುಂದರ ಸಮಾಜ ಕಟ್ಟುವತ್ತ ಸಾಗಬೇಕಾಗಿದೆ ಎಂದು ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಲಿಂಬಯ್ಯಸ್ವಾಮಿಮಠದಲ್ಲಿ ನವರಾತ್ರಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ನಂದಾ ದೀಪಾರಾಧನೆ ಮತ್ತು ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಹಿರಿಯರ ಅನುಭವ ಸಮಾಜಕ್ಕೆ ದಾರಿ ದೀಪವಿದ್ದಂತೆ ಅದನ್ನು ಬಳಸಿಕೊಳ್ಳಬೇಕು, ಪಟ್ಟಣದಲ್ಲಿ ಲಿಂಬಯ್ಯಸ್ವಾಮಿಮಠ ಕಾಯಕ, ದಾಸೋಹ, ಅನುಭವ ಸಿದ್ಧಾಂತದ ಪರಂಪರೆ, ಆಚಾರ ತಳಹದಿ ಮೇಲೆ ನಿಂತು ಕೆಲಸ ಮಾಡುವ ಮಠವಾಗಿದೆ. ಪ್ರತಿಷ್ಠಾನದಿಂದ ದೇಹದಾನ, ನೇತ್ರದಾನ ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಸಂದೇಶವಾಗಿದೆ. ಇಂತಹ ಮಾದರಿ ಕಾರ್ಯಗಳು ಇನ್ನೊಬ್ಬರಿಗೆ ಮಾರ್ಗದರ್ಶನವಾಗಲಿ ಎಂದರು.
ನವರಾತ್ರಿ ಪವಿತ್ರ ಕಾಲದಲ್ಲಿ ಕೈಗೊಳ್ಳುವ ಧರ್ಮ ಕಾರ್ಯದಿಂದ ಮನುಷ್ಯನಲ್ಲಿನ ಅಜ್ಞಾನ, ಅಂಧಕಾರ, ದುರ್ಗಣಗಳು ನಾಶವಾಗಿ ಸಾತ್ವಿಕ ಸದ್ಗುಣಗಳೊಂದಿಗೆ ದೈವತ್ವ ಪ್ರಾಪ್ತವಾಗುತ್ತದೆ. ಸಮಾಜದ ತೆರೆಮರೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸುಪ್ತಚೇತನ ಶ್ರೀಮಠದಿಂದ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಮಾತನಾಡಿ, ಶ್ರೀಮಠದ ಪರಂಪರೆ, ಸಂಪ್ರದಾಯ ಮತ್ತು ಪ್ರತಿಷ್ಠಾನದ ಉದ್ದೇಶ ಮತ್ತು ನಮ್ಮ ಹಿರಿಯರು ಹಾಕಿಕೊಟ್ಟ ಸಮಾಜಮುಖಿ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುವದಾಗಿ ಹೇಳಿದರು.
ಕೆಸರಳ್ಳಿಯ ಹಾಲಯ್ಯ ಕುಲಕರ್ಣಿ ಅವರಿಗೆ ಕಾಯಕಜೀವಿ, ಪಟ್ಟಣದ ಪ್ರತಿಮಾ ಮಹಾಂತಶೆಟ್ಟರ ಅವರಿಗೆ ಆದರ್ಶ ಸಾತ್ವಿಕ ಜೀವಿ ಮತ್ತು ಫಕೀರಪ್ಪ ಕಳ್ಳಿಮನಿ ಅವರಿಗೆ ಸಮಾಜ ಜೀವಿ ಎಂಬ ಬಿರುದಾಂಕಿತದ ಗೌರವ ಪುರಸ್ಕಾರ ನೀಡಲಾಯಿತು.
ಸೋಮಶೇಖರ ಕೆರಿಮನಿ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಉಪಾಧ್ಯಕ್ಷ ಪಿದೋಸ್ ಆಡೂರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾಗರಾಜ ಶಿಗ್ಲಿ ಅವರನ್ನು ಸನ್ಮಾನಿಸಲಾಯಿತು. ಹರ್ಲಾಪುರದ ಸಾಂಬಯ್ಯ ಹಿರೇಮಠ ಹಾಗೂ ಸಂಗಡಿಗರು ಜಾನಪದ ಸಂಗೀತ ಕಾರ್ಯಕ್ರಮ ನಡೆಸಿದರು.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಷ್ಠಾನದ ಧರ್ಮದರ್ಶಿ ಆನಂದ ಗಡ್ಡದೇವರಮಠ, ಚಿದಾನಂದ ಲಿಂಬಯ್ಯಸ್ವಾಮಿಮಠ, ಸುಭಾಸ ಓದುನವರ, ದಿಲೀಪ್ ನಾಯರ, ಈಶ್ವರ ಮೆಡ್ಲೇರಿ, ನಿಂಗಪ್ಪ ಬನ್ನಿ ಇತರರು ಇದ್ದರು. ಮಹೇಶ ಲಿಂಬಯ್ಯಸ್ವಾಮಿಮಠ, ಸೌಭಾಗ್ಯ ಕವಲೂರಮಠ, ವೇದಾಂತ ಲಿಂಬಯ್ಯಸ್ವಾಮಿಮಠ ನಿರ್ವಹಿಸಿಸಿದರು.